ಶ್‌ ! ಗಪ್‌ ಚುಪ್‌ !!

ಕರ್ವಾಲೋ | June 3, 2014

Print Friendly

ನಡಿಗೆ ವೀರ
shu-veera
ಕೆಂಟ್‌ನ ಪೋರ್ಟ್‌ ಲೈಂಪ್ನಿ ಪಾರ್ಕ್‌ನಲ್ಲಿರುವ ಈ ಗೊರಿಲ್ಲಾಗೆ ಆರು ದಶಲಕ್ಷ ಆನ್‌ಲೈನ್‌ ಅಭಿಮಾನಿಗಳಿದ್ದಾರೆ. ಎಲ್ಲ ಕಪಿ ಮಾನವರಂತೆ ಇದೂ ಇದೆ ಎಂದರೆ ನಮ್ಮ ಎಣಿಕೆ ತಪ್ಪಾಗುತ್ತದೆ. ಏಕೆಂದರೆ ಇದು ಮನುಷ್ಯರಂತೆ ನಡೆಯುತ್ತದೆ. ಮುಂಗಾಲುಗಳನ್ನು ಬಳಸುವುದೇ ಇಲ್ಲ. ಮೊದಲಿನಿಂದಲೂ ಇಂಥದ್ದೇ ಅಭ್ಯಾಸ. ಇತ್ತೀಚೆಗಷ್ಟೆ 24ನೆಯ ಹುಟ್ಟುಹಬ್ಬ ಆಚರಿಸಿಕೊಂಡಿದೆ. ಅಬಾಂ ನಡೆಯುತ್ತಿದ್ದರೆ ಇದರ ಬಂಧು ಬಳಗ ಕೂಡ ನಡೆಯುವ ಸ್ಟೆ „ಲ್‌ ತೋರಿಸುತ್ತವಂತೆ.

ಕಾಡುವ ಹುಡುಗಿ
shu-hudugi
ಕೇವಲ 36 ವರ್ಷಕ್ಕೆ (1926-1962) ಉತ್ಕಟವಾಗಿ ಜೀವನವನ್ನು ಅನುಭವಿಸಿ ಉಲ್ಕೆಯಂತೆ ಉರಿದು ಹೋದ ನಟಿ, ರೂಪದರ್ಶಿ, ಹಾಡುಗಾರ್ತಿ ಹಾಗೂ ಸೆಕ್ಸ್‌ ಸಿಂಬಲ್‌ ಮರ್ಲಿನ್‌ ಮನ್ರೊ ಪಶ್ಚಿಮವನ್ನು ಈಗಲೂ ಕಾಡುವ ಹೆಣ್ಣು. ಕೆನಡಾದಲ್ಲಿ ಈಕೆಯ 26 ಅಡಿ ಎತ್ತರದ ಪ್ರತಿಮೆಯೊಂದು ಅನಾವರಣಕ್ಕೆ ರೆಡಿಯಾಗಿದೆ. ಅಮೆರಿಕಾದ ಸ್ಟೀವರ್ಡ್‌ ಜಾನ್ಸನ್‌ ಎಂಬ ಕಲಾವಿದ ಉಕ್ಕು ಮತ್ತು ಅಲ್ಯುಮೀನಿಯಮ್‌ನಿಂದ ಇದನ್ನು ರೂಪಿಸಿದ್ದಾನೆ. ಕೆಲವು ವರ್ಷಗಳ ಹಿಂದೆ ಇದನ್ನೇ ಚಿಕಾಗೋದಲ್ಲಿ ಪ್ರದರ್ಶಿಸಿ ಎಲ್ಲರನ್ನೂ ಪುಳಕಗೊಳಿಸಿದ್ದ. ಗಾಳಿ ಮಾತಿಗೆ ಹಾರುತ್ತಿರುವ ಸ್ಕರ್ಟ್‌ ಹಿಡಿದುಕೊಳ್ಳುತ್ತಿರುವ ಈ ಭಂಗಿ ವಿಶ್ವಪ್ರಸಿದ್ಧ. ಹ್ಯಾಮಿಲ್ಟನ್‌ನಲ್ಲಿ ತಲೆಯೆತ್ತಿರುವ ಈ ಪ್ರತಿಮೆಯ ಹೆಸರು “ಫಾರೆವರ್‌ ಮರ್ಲಿನ್‌’. ಬೀಯಿಂಗ್‌ ನಾರ್ಮಲ್‌ ಈಸ್‌ ಬೋರಿಂಗ್‌ ಎಂದು ಬದುಕಿದವರೆಲ್ಲ ಈಗ ತುಂಬ ಜನಪ್ರಿಯರಾಗುತ್ತಾರೆ ಬಿಡಿ.

ಬೀಸಣಿಕೆ ಮೀನು

shu-meenuಸಮುದ್ರಕ್ಕೆ ನಂಟು ಉಪ್ಪಿಗೆ ಬರ. ಸಾಗರದ ತೆರೆಗಳ ಮೇಲೆ ಹುಟ್ಟು ಹಾಕುತ್ತ ಸಾಗುವಾಗ ಹವಾ ತಂಪಾಗಿರೋದಿಲ್ಲ ಎಂಬುದು ಕರಾವಳಿ ಮಂದಿಗೆ ಚೆನ್ನಾಗಿ ಗೊತ್ತು. ಆದ್ದರಿಂದ ಇವ್ರು ಬೀಸಣಿಕೆ ಇಟ್ಟುಕೊಂಡಿರಬಹುದು ಎಂದು ತಿಳಿದು ಕೊಳ್ಳಬೇಡಿ. ಇದು ಬೀಸಣಿಕೆ ಅಲ್ಲ; ಹಾಗೆ ಕಾಣುವ ಒಂದು ಜಾತಿಯ ಮೀನು. ಮನುಷ್ಯರ ಕೈಗೆ ಸಿಕ್ಕಿ ಅದೂ ಪುಳಕಗೊಂಡಂತೆ ಬಾಯ್‌ ತೆರೆದಿದೆ. ನೀರಿನಿಂದ ಹೊರಗೆ ಉಸಿರು ತೆಗೆದು ಕೊಳ್ಳಲಾಗದೆ ಬಾಯ್‌ ಬಿಟ್ಟಿರಬಹುದು. ದಕ್ಷಿಣ ಹಿಂದೂ ಮಹಾಸಾಗರದಲ್ಲಿ ಯಾನಿಯೊಬ್ಬರು ವಿಚಿತ್ರ ಜೀವಿಯ ಸಹವಾಸದಿಂದ ಭಪ್ಪರೆ ಭಲಾರೆ ಅಂದುಕೊಂಡಿದ್ದು ಮಾತ್ರ ನಿಜ.

ಏನ್‌ ಮರಿ ನಿನ್ನ ಅದೃಷ್ಟ !

shu-adrustaಬ್ರಿಟನ್‌ ರಾಜಕುಮಾರ ವಿಲಿಯಂ, ಪತ್ನಿ ಕೇಟ್‌ ಇತ್ತೀಚೆಗೆ ನ್ಯೂಜಿಲೆಂಡ್‌ ಪ್ರವಾಸ ಹೋಗಿದ್ದರು. ಕೇಟ್‌ ಕಂಕುಳಲ್ಲಿ ಹಾಲುಗಲ್ಲದ ಪ್ರಿನ್ಸ್‌ ಜಾರ್ಜ್‌.

ಪ್ರಧಾನಿಯಾದಿಯಾಗಿ ಎಲ್ಲರೂ ಮುದ್ದು ಮಾಡುವವರೇ. ಮಕ್ಕಳನ್ನು ಕಂಡು ಎಲ್ಲರೂ ಮಕ್ಕಳಾಗುತ್ತಾರೆ. ಉದಾರಿಗಳಾಗುತ್ತಾರೆ.
ಇದೀಗ ವಿಲಿಯಂ ತನ್ನ ಮಗನಿಗೆ ಬಂದ ಉಡುಗೊರೆಗಳನ್ನು ಸಾಗಿಸಲು ಮತ್ತೂಂದು ವಿಮಾನ ಮಾಡಬೇಕು. ಏಕೆಂದರೆ, ಪುಟ್ಟ ಸೀಲೆಗ್ಸ್‌ ವಿಮಾನದಿಂದ ಹಿಡಿದು, ಸೈಕಲ್‌ ಮತ್ತಿತರ ನೂರಾರು ಕಾಣಿಕೆಗಳು ಮರಿ ರಾಜಕುಮಾರನಿಗೆ ಬಂದಿವೆ. ಚಿನ್ನದ ಚಮಚೆ ಬಾಯಲ್ಲಿಟ್ಟುಕೊಂಡು ಹುಟ್ಟುವುದು ಅಂದ್ರೆ ಇದೇ.

Leave a Reply

Your email address will not be published. Required fields are marked *

ನೀವು ನೋಡುತ್ತಿರುವುದು ಉಚಿತ ಪ್ರತಿ, ತರಂಗದ ಪೂರ್ಣಪ್ರತಿಯನ್ನು ಫ್ಲಿಪ್ ಬುಕ್ ರೂಪದಲ್ಲಿ ಪಡೆಯಲು ಚಂದಾದಾರರಾಗಿ.

Powered By Indic IME