ವಾರ್ತಾ ತರಂಗ

ಸಂಜಯ | June 3, 2014

Print Friendly

ಹೆಸರಿನ ಗಲಾಟೆ

vartha-galateಚುನಾವಣಾ ಆಯೋಗಕ್ಕೆ ಚಿತ್ರ-ವಿಚಿತ್ರವಾದ ದೂರುಗಳು ಬರುತ್ತಿವೆ. ಅವುಗಳಲ್ಲಿ ಇದೊಂದು ಸ್ಯಾಂಪಲ್‌. ಮಥುರಾ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ನಟಿ, ಹೇಮಾಮಾಲಿನಿ ಹಾಗೂ ಬಿಎಸ್ಪಿ$ನಾಯಕ ಯೋಗೇಶ್‌ ದ್ವಿವೇದಿ ದೂರು ನೀಡಿದ್ದಾರೆ. ಎಲೆಕ್ಟ್ರಾನಿಕ್‌ ಮತ ಯಂತ್ರದಲ್ಲಿ ತಮ್ಮ ಹೆಸರನ್ನು ಕಡೆಯ ಸಾಲಿನಲ್ಲಿ ಹಾಕಿರುವುದು ಸರಿಯಲ್ಲ. ತಾವಿಬ್ಬರೂ ರಾಷ್ಟ್ರೀಯ ಪಕ್ಷಗಳಿಗೆ ಸೇರಿದವರಾಗಿದ್ದರಿಂದ ತಮ್ಮ ಹೆಸರನ್ನು ಮೇಲಿನ ಸಾಲಿನಲ್ಲಿ ಹಾಕಬೇಕು. ಆದರೆ, ಎಸ್ಪಿ$ಅಭ್ಯರ್ಥಿ ಚಂದನ್‌ ಸಿಂಗ್‌ ಮತ್ತು ಆರ್‌ಎಲ್‌ಡಿ ಅಭ್ಯರ್ಥಿ ಜಯಂತ್‌ ಚೌಧರಿ ಅವರ ಹೆಸರು ಮೇಲಿನ ಸಾಲಿನಲ್ಲಿದೆ ಎಂದು ಅವರು ದೂರಿದ್ದಾರೆ.

ಬಿಜೆಪಿಯ ಜಿಲ್ಲಾ ಮಹಾ ಕಾರ್ಯದರ್ಶಿ ರವೀಂದ್ರ ಪಾಂಡೆ ಅವರು ಈ ಕುರಿತು ಪ್ರತಿಕ್ರಿಯಿಸಿದ್ದು, ಆಡಳಿತ ಪಕ್ಷವನ್ನು ಮೆಚ್ಚಿಸುವ ದೃಷ್ಟಿಯಿಂದ ಜಿಲ್ಲಾಡಳಿತ ಈ ಕ್ರಮ ಕೈಗೊಂಡಿದೆ ಎಂದಿದ್ದಾರೆ.

ಇದೀಗ ಕೇಂದ್ರ ಚುನಾವಣಾ ಆಯೋಗದ ಮೊರೆ ಹೋಗಿದ್ದಾರೆ.


ಕಾಲ್ಚೆಂಡು ಇನ್ನಿಂಗ್ಸ್‌ ಶುರು

vartha-inningsದೇಶೀಯ ಕಾಲ್ಚೆಂಡು ಆಟಕ್ಕೆ ಶಕ್ತಿ ತುಂಬುವ ಸಲುವಾಗಿ ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) ಫುಟ್ಬಾಲ್‌ ಟೂರ್ನಿಯ ಎಂಟು ತಂಡಗಳು ಸಜ್ಜಾಗಿವೆ. ಕ್ರಿಕೆಟ್‌ ಕಲಿಗಳಾದ ಸಚಿನ್‌ ತೆಂಡೂಲ್ಕರ್‌ ಹಾಗೂ ಸೌರವ್‌ ಗಂಗೂಲಿ ಫ್ರಾಂಚೈಸಿ ಖರೀದಿಸುವ ಮೂಲಕ ಫುಟ್ಬಾಲ್‌ನಲ್ಲೂ ಒಂದು ಕೈ ನೋಡಲು ಮುಂದಾಗಿದ್ದಾರೆ.

ಐಪಿಎಲ್‌ ಕಂಡ ಭರ್ಜರಿ ಯಶಸ್ಸಿನಿಂದ ಪ್ರೇರಣೆ ಪಡೆದಿರುವ ಐಎಸ್‌ಎಲ್‌ನ ಮೊದಲ ಆವೃತ್ತಿ ಇದೇ ವರ್ಷ ಸೆಪ್ಟಂಬರ್‌ ಹಾಗೂ ನವಂಬರ್‌ ತಿಂಗಳಿನಲ್ಲಿ ಐಎಮ್‌ಜಿ ರಿಲೈನ್ಸ್‌ ಆಶ್ರಯದಲ್ಲಿ ನಡೆಯಲಿದೆ.

ಇತ್ತೀಚೆಗೆ ನಡೆದ ಹರಾಜು ಪ್ರಕ್ರಿಯೆಯಲ್ಲಿ ಕ್ರಿಕೆಟ್‌ ದಿಗ್ಗಜರಾದ ಸಚಿನ್‌ ಹಾಗೂ ಗಂಗೂಲಿ ಸೇರಿದಂತೆ ಬಾಲಿವುಡ್‌ನ‌ ಸೂಪರ್‌ ಸ್ಟಾರ್‌ಗಳಾದ ಸಲ್ಮಾನ್‌ ಖಾನ್‌, ರಣ್‌ಬೀರ್‌ ಕಪೂರ್‌ ಹಾಗೂ ಜಾನ್‌ ಅಬ್ರಹಾಮ್‌ ಅವರೂ ಫ್ರಾಂಚೈಸಿ ತಂಡಗಳನ್ನು ತಮ್ಮದಾಗಿಸಿಕೊಂಡರು. ಏಳು ಮಂದಿ ಸದಸ್ಯರನ್ನೊಳಗೊಂಡ ಉನ್ನತ ಮಟ್ಟದ ಸಮಿತಿಯು ಹರಾಜು ಪ್ರಕ್ರಿಯೆ ನಡೆಸಿಕೊಟ್ಟಿದ್ದು, ಫ್ರಾಂಚೈಸಿಗಳ ದಾಖಲೆ ಪತ್ರಗಳನ್ನು ಪರಿಶೀಲಿಸಿವೆ.

ಕಳೆದ ವರ್ಷ ಕ್ರಿಕೆಟ್‌ಗೆ ಗುಡ್‌ ಬೈ ಹೇಳಿದ ವಿಶ್ವ ಶ್ರೇಷ್ಠ ಬ್ಯಾಟ್ಸ್‌ಮನ್‌ ಸಚಿನ್‌ ತೆಂಡೂಲ್ಕರ್‌ ಕೊಚ್ಚಿ ತಂಡವನ್ನು ಖರೀದಿದ್ದಾರೆ. ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಸೌರವ್‌ ಗಂಗೂಲಿ, ಉದ್ಯಮಿಗಳಾದ ಹರ್ಷವರ್ಧನ್‌ ನೆವಾಟಿಯಾ, ಸಂಜೀವ್‌ ಗೋಯೆಂಕಾ ಹಾಗೂ ಉತ್ಸವ್‌ ಪರೇಖ್‌ ಪಾಲುದಾರಿಕೆಯೊಂದಿಗೆ ಬಂಗಾಳ ತಂಡವನ್ನು ಖರೀದಿಸಿದ್ದಾರೆ.

ಬಾಲಿವುಡ್‌ ನಟ ರಣ್‌ಬೀರ್‌ ಕಪೂರ್‌ ಹಾಗೂ ಬಿಮಲ್‌ ಪರೇಖ್‌ ಮುಂಬಯಿ ತಂಡದ ಮಾಲೀಕತ್ವ ಪಡೆದರೆ, ಸೂಪರ್‌ ಸ್ಟಾರ್‌ ಸಲ್ಮಾನ್‌ ಖಾನ್‌ ವಾಧ್ವಾ ಗ್ರೂಪ್ಸ್‌ ಸಹಯೋಗದೊಂದಿಗೆ ಪುಣೆ ತಂಡವನ್ನು ತಮ್ಮದಾಗಿಸಿಕೊಂಡಿದ್ದಾರೆ. ಹಾಕಿ ಇಂಡಿಯಾ ಲೀಗ್‌ನಲ್ಲಿ ತಂಡಗಳ ಸಹ ಮಾಲೀಕತ್ವ ಪಡೆದಿರುವ ಮತ್ತೂಬ್ಬ ಬಾಲಿವುಡ್‌ ನಟ ಜಾನ್‌ ಅಬ್ರಹಾಮ್‌ ಐ-ಲೀಗ್‌ನ ಶಿಲಾಂಗ್‌ ಲಾಜಾಂಗ್‌ ತಂಡದೊಂದಿಗೆ ಕೈ ಜೋಡಿಸಿ ಗುವಾಹಟಿ ತಂಡ ಖರೀದಿ ಮಾಡಿದ್ದಾರೆ.

ಆರ್‌ಟಿಐ ಜಾರಿಯಲ್ಲಿ ಲೋಪ: ಸುಪ್ರೀಂ ನೊಟೀಸ್‌

vartha-rtiಖಾಸಗಿ ಶಾಲೆಗಳಲ್ಲೂ ಬಡ ಮಕ್ಕಳಿಗೆ ಶಿಕ್ಷಣ ಕಲ್ಪಿಸುವ ಶಿಕ್ಷಣ ಹಕ್ಕು ಕಾಯ್ದೆ ಪರಿಣಾಮಕಾರಿಯಾಗಿ ಜಾರಿಯಾಗಿಲ್ಲ. ಬಡಮಕ್ಕಳನ್ನು ದೂರ ತಳ್ಳಲು ಖಾಸಗಿ ಶಾಲೆಗಳು ನಾನಾ ತಂತ್ರಗಳನ್ನು ಅನುಸರಿಸುತ್ತಿವೆ. ಇದಕ್ಕೆ ಕಡಿವಾಣ ಹಾಕಲು ನ್ಯಾಯಬದ್ಧ ಹಕ್ಕುಗಳನ್ನು ಕಲ್ಪಿಸಲು ಸ್ಥಳೀಯ ಮಟ್ಟದ ಅಧಿಕಾರಿಗಳು ಸೋತಿದ್ದಾರೆ. ಏಕೆಂದರೆ, ಇವರೆಲ್ಲ ಖಾಸಗಿ ಶಾಲೆಗಳ ಮರ್ಜಿಗೆ ಬಿದ್ದಿರುವವರೆ ಆಗಿರುತ್ತಾರೆ. ಇದೀಗ ಈ ಸಮಸ್ಯೆ ಬಗ್ಗೆ ಸುಪ್ರೀಂಕೋರ್ಟ್‌ ಕಣ್ಣು ಬಿಟ್ಟಿದೆ.

ದೇಶಾದ್ಯಂತ ಅನೇಕ ಶಾಲೆಗಳಲ್ಲಿ ಶಿಕ್ಷಣದ ಹಕ್ಕು ಕಾಯಿದೆ (ಆರ್‌ಟಿಇ) ಉಲ್ಲಂಘನೆಯಾಗುತ್ತಿರುವುದರ ವಿರುದ್ಧ ಸಂಘಟನೆಯೊಂದು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌ ಈ ಸಂಬಂಧ ವಿವರಣೆ ನೀಡುವಂತೆ ಕೇಂದ್ರ, ರಾಜ್ಯ ಸರಕಾರಗಳಿಗೆ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ನೊಟೀಸ್‌ ನೀಡಿದೆ. “ಶಿಕ್ಷಣಕ್ಕಾಗಿ ರಾಷ್ಟ್ರೀಯ ಮೈತ್ರಿಕೂಟ’ ಎಂಬ ಸಂಘಟನೆಯು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡ ಮುಖ್ಯ ನ್ಯಾಯಮೂರ್ತಿ ಪಿ. ಸದಾಶಿವಂ ನೇತೃತ್ವದ ನ್ಯಾಯಪೀಠವು, ಆರ್‌ಟಿಇ ಕಾಯಿದೆ ಜಾರಿಯಲ್ಲಿ ಕೇಳಿಬಂದ ದೂರುಗಳಿಗೆ ಸಂಬಂಧಿದಂತೆ ಬೇಸಿಗೆ ರಜೆ ಕಳೆದ ಅನಂತರ ಪ್ರತಿಕ್ರಿಯೆ ಸಲ್ಲಿಸುವಂತೆ ಕೇಂದ್ರ, ರಾಜ್ಯ ಸರಕಾರಗಳಿಗೆ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿದೆ.

ವಿಮಾನ ಶೋಧಕ್ಕೆ ಜಲಾಂತರ್ಗಾಮಿ

vartha-vimanaನಿಗೂಢವಾಗಿ ಕಣ್ಮರೆಯಾಗಿರುವ ಮಲೇಷ್ಯಾ ವಿಮಾನದ ಪತ್ತೆ ಕಾರ್ಯಾಚರಣೆ ಇದೀಗ ಆಕಾಶ ಬಿಟ್ಟು ಸಮುದ್ರ ತಳದಲ್ಲಿ ಶುರುವಾಗಿದೆ. ದಕ್ಷಿಣ ಹಿಂದೂ ಮಹಾಸಾಗರದ ಆಳದಲ್ಲಿ ಅಮೆರಿಕದ ಜಲಾಂತರ್ಗಾಮಿಗಳು ಹುಡುಕಾಟ ಆರಂಭಿಸಿದ್ದಾರೆ. ಆರು ವಾರಗಳ ಶೋಧ ಕಾರ್ಯ ನಿಷ#ಲಗೊಂಡ ಅನಂತರ ಈ ಹೊಸ ಹಂತದ ಕಾರ್ಯಾಚರಣೆ ಆರಂಭಿಸಲಾಗಿದೆ.

“”ಮಲೇಷ್ಯಾ ವಿಮಾನದ ಬ್ಲ್ಯಾಕ್‌ ಬಾಕ್ಸ್‌ನಿಂದ ಸಂಕೇತಗಳನ್ನು ಗ್ರಹಿಸಲು ಹಿಂದೂ ಮಹಾಸಾಗರದ ಆಳದಲ್ಲಿ ರೊಬೊಟಿಕ್‌ ಜಲಾಂತರ್ಗಾಮಿಗಳನ್ನು ಕಳುಹಿಸಲಾಗಿದೆ” ಎಂದು ಆಸ್ಟ್ರೇಲಿಯಾದ ಪಶ್ಚಿಮ ತೀರದ ಶೋಧ ಕಾರ್ಯಾಚರಣೆ ಮೇಲ್ವಿಚಾರಣೆ ವಹಿಸಿರುವ ಜಂಟಿ ಸಮಿತಿಯ ಮುಖ್ಯಸ್ಥರಾದ ಆ್ಯಂಗಸ್‌ ಹ್ಯೂಸ್ಟನ್‌ ಹೇಳಿದ್ದಾರೆ. ಬ್ಲೂಫಿನ್‌ 21 ಮಾನವ ರಹಿತ ಜಲಾಂತರ್ಗಾಮಿ, ಪ್ರದೇಶದ ಮೂರು ಆಯಾಮದ ಜಲಾಂತರ ಶಬ್ದ ಶೋಧಕ ನಕ್ಷೆಯನ್ನು ಸೃಷ್ಟಿಸಬಲ್ಲದು. ಇದರಿಂದ ಸಾಗರದ ಅಡಿಯಲ್ಲಿ ಇರಬಹುದಾದ ಅವಶೇಷಗಳ ಪತ್ತೆ ಸಾಧ್ಯ.

ಉಪನಗರಗಳು ಮಾರಕ

vartha-marakaಭಾರತವೂ ಸೇರಿದಂತೆ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಉಪನಗರಗಳು ಭಾರೀ ಪ್ರಮಾಣದಲ್ಲಿ ತಲೆ ಎತ್ತುತ್ತಿವೆ. ಆದರೆ ಇಂಥ ಉಪನಗರಗಳು ಬಡಜನರನ್ನು ನೈಸರ್ಗಿಕ ವಿಕೋಪ ಹಾಗೂ ರೋಗರುಜಿನಗಳ ಅಪಾಯಕ್ಕೆ ನೂಕುತ್ತಿವೆ ಎಂಬ ಅಂಶವನ್ನು ಅಧ್ಯಯನವೊಂದು ತಿಳಿಸಿದೆ.

ಏಷ್ಯಾ, ಆಫ್ರಿಕಾ, ಲ್ಯಾಟಿನ್‌ ಅಮೆರಿಕದ ರಾಷ್ಟ್ರಗಳು ಮಿತಿಮೀರಿದ ಜನಸಂಖ್ಯೆಯ ಹೊರೆಯ ಪರಿಹಾರಕ್ಕೆಂದು ಈಗಿರುವ ನಗರಗಳ ಹೊರವಲಯದಲ್ಲಿ ಹೊಸ ನಗರಗಳನ್ನು ಅಥವಾ ಉಪನಗರಗಳನ್ನು ನಿರ್ಮಿಸುವ ಯೋಜನೆಗಳನ್ನು ಹಮ್ಮಿಕೊಳ್ಳುತ್ತಿವೆ. ಇಂತಹ ನಗರಗಳು ಬಡಜನರು ಹಾಗೂ ಕೆಳ ಮಧ್ಯಮ ವರ್ಗದವರಿಗೆ ಆಶಾಕಿರಣಗಳಾಗಿವೆ. ಆದರೆ ಎಷ್ಟೇ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ವಸತಿ, ರಸ್ತೆ, ವಿದ್ಯುತ್‌, ನೀರು ಸೌಕರ್ಯಗಳನ್ನು ಕಲ್ಪಿಸಿ ಇಂಥ ಯೋಜನೆಗಳನ್ನು ನಿರ್ಮಿಸಿದರೂ ಅಲ್ಲಿ ವಾಸಿಸುವ ಬಡಜನರನ್ನು ಪ್ರವಾಹ ಮತ್ತಿತರ ನೈಸರ್ಗಿಕ ವಿಕೋಪಗಳಿಗೆ ಹಾಗೂ ಕಾಲರಾ, ಹೆಪಟೈಟಿಸ್‌ ಮತ್ತಿತರ ಕಾಯಿಲೆಗಳಿಗೆ ಸಿಲುಕುವ ಅಪಾಯ ಎದುರಾಗುತ್ತಿದೆ ಎಂದು ಯೂನಿವರ್ಸಿಟಿ ಆಫ್‌ ಕೊಲರಾಡೊ ಡೆನೆವರ್‌ನ ಪ್ರೊಫೆಸರ್‌ ಆ್ಯಂಡ್ರೂ ರೊಂಬಾಕ್‌ ತಂಡ ಹೇಳಿದೆ.

ನಗರದ ಚರಂಡಿ ನೀರನ್ನು ಹೊರವಲಯದತ್ತ ಹರಿಯಬಿಡುವುದು, ನಗರದಿಂದ ಉತ್ಪತ್ತಿಯಾಗುವ ಕಸದ ರಾಶಿಯನ್ನು ಹೊರವಲಯದತ್ತ ತಂದು ಎಸೆಯುವುದು, ಸರಿಯಾದ ಯೋಜನೆ ರೂಪಿಸದಿರುವುದು ಮತ್ತಿತರ ಕಾರಣಗಳು ಉಪನಗರಗಳಲ್ಲಿ ವಾಸಿಸುವ ಜನರನ್ನು ಸಂಕಷ್ಟಕ್ಕೆ ದೂಡುವ ಕಾರಣಗಳು ಎಂದು ಅಧ್ಯಯನ ಹೇಳಿದೆ. ಇದಕ್ಕೆ ಅಧ್ಯಯನ ತಂಡವು ಕೋಲ್ಕತಾದಲ್ಲಿನ ಬೆಳವಣಿಗೆಗಳನ್ನು ಉದಾಹರಿಸಿದೆ. ಭಾರತ 2020ರ ವೇಳೆ ಕನಿಷ್ಠವೆಂದರೂ 100 ಇಂಥ ನಗರಗಳನ್ನು ನಿರ್ಮಿಸುವ ಗುರಿ ಇಟ್ಟುಕೊಂಡಿದೆ. ಅನೇಕ ರಾಜಕೀಯ ಪಕ್ಷಗಳ ಪ್ರಣಾಳಿಕೆಯಲ್ಲಿ ಇದೊಂದು ಮುಖ್ಯ ಅಜೆಂಡಾ ಆಗಿದೆ.

Leave a Reply

Your email address will not be published. Required fields are marked *

ನೀವು ನೋಡುತ್ತಿರುವುದು ಉಚಿತ ಪ್ರತಿ, ತರಂಗದ ಪೂರ್ಣಪ್ರತಿಯನ್ನು ಫ್ಲಿಪ್ ಬುಕ್ ರೂಪದಲ್ಲಿ ಪಡೆಯಲು ಚಂದಾದಾರರಾಗಿ.

Powered By Indic IME