ಕಥೆಗಳು

ಮಗಳೇ ಎಲ್ಲ ನಿನಗಾಗಿ

ಸತ್ಯಬೋಧ | June 3, 2014

Print Friendly

kathe-incert“”ನಿನ್ನ ಹಣೆಬರಹ…!” ಎಂದವರೇ ಕೈಲಿ ಬ್ಯಾಗ್‌ ಹಿಡಿದು ಸರಸರ ನಾಗಭೂಷಣ ಹೊರಟೇಬಿಟ್ಟರು. ಅವರಿಗೂ ಸಿಟ್ಟು ಬಂದಿತ್ತು. ಮನಸ್ಸು ಪ್ರಕ್ಷುಬ್ಧಗೊಂಡಿತ್ತು.

“”ಮೆಡಿಕಲ್‌ ಸಿಗದಿದ್ದರೆ ನರ್ ಆಗತೀನಿ ಇಂಜಿನಿಯರಿಂಗ್‌ ಮಾತ್ರ ಸೇರಲ್ಲ” ಎಂದಿದ್ದಳು ವಾರುಣಿ ಅಪ್ಪನನ್ನು ಕುಟುಕುವಂತೆ. ಎಂದಿನಂತೆ ಆಗಿದ್ದರೆ “”ಅದೇ ಆಗು. ಅಭ್ಯಂತರವಿಲ್ಲ” ಎಂದು ನಗುತ್ತಾ ಮಗಳ ಕೆನ್ನೆ ಸವರಿ ಹೊರಟಿರುತ್ತಿದ್ದರು. ಆದರೆ ಇಂದು ಅದೇ ಮಾತು ಸಿಡಿಮಿಡಿಗೊಳಿಸಿತ್ತು. “ನಾನು ಡಾಕ್ಟರ್‌ ಆಗಬೇಕು’ ಎಂದು ಮೂರು -ನಾಲ್ಕು ವರ್ಷಗಳಿಂದ ದಿನಕ್ಕೆ ಒಂದು ಸಲವಾದರೂ ಮಗಳು ಹೇಳುತ್ತಿದ್ದಳು. ಅಪ್ಪನೂ ಉತ್ತೇಜನಗೊಂಡು “”ಡಾಕ್ಟರೇ ಆಗು. ನಾನು ಓದಿಸುತ್ತೀನಿ” ಎಂದು ಹೆಮ್ಮೆಯಿಂದ ಮಗಳ ಮಾತಿಗೆ ಸಹಮತ ವ್ಯಕ್ತಪಡಿಸುತ್ತಿದ್ದರು. ಇರುವ ಒಬ್ಬ ಮಗಳು ಡಾಕ್ಟರಾಗಲಿ ಎಂಬ ಸಹಜ ಆಸೆ ಅವರದಾಗಿತ್ತು.

ಆದರೆ ಈಗ ಭವಿಷ್ಯ ವರ್ತಮಾನವಾಗುತ್ತಿದ್ದಂತೆ ವಾಸ್ತವ ಅರಿವಾಗಿತ್ತು. ಮೆಡಿಕಲ್‌ ಎಂದರೆ ಲಕ್ಷಾಂತರ ಡೊನೇಶನ್‌. ಇಲ್ಲ ಡಿಸ್ಟಿಂಕ್ಷನ್‌; ಇಲ್ಲಿ ವಿಪರೀತ ಸ್ಪರ್ಧೆ. ನಾಮುಂದು ತಾಮುಂದು ಎಂಬ ಹೋರಾಟ. ಸ್ಪರ್ಧೆ ಎಂದರೆ ಏನೂ ಆಗಬಹುದು. ಮಗಳೇನೋ ಜಾಣೆ. ಇಂದೋ ನಾಳೆಯೋ ಫ‌ಲಿತಾಂಶ. ಮೆರಿಟ್‌ ಮೇಲೆ ಸೀಟು ಸಿಗದಿದ್ದರೆ?

“”ಮ್ಯಾನೇಜ್‌ಮೆಂಟ್‌ ಪೇಮೆಂಟ್‌ ಸೀಟ್‌ ಸಿಕ್ಕೇ ಸಿಗುತ್ತೆ” ಮಗಳು ಎಂದಾಗ ರಾಯರು ಕಂಪಿಸಿದರು. ತಮ್ಮ ಕನಸು ಇಷ್ಟು ದುಬಾರಿ ಎಂಬ ಸತ್ಯ ತಿಳಿದು ವಿಹ್ವಲರಾದರು. ಅದನ್ನು ತೋರಗೊಡದೆ “”ಚೆನ್ನಾಗಿ ಮಾಡಿದೀಯ. ಮೆರಿಟ್‌ ಸೀಟ್‌ ಸಿಗುತ್ತೆ ಬಿಡು” ಎಂದರು.

“”ಸಿಗುತ್ತೆ. ಅಕಸ್ಮಾತ್‌ ಸಿಗದಿದ್ದರೆ!”
“ಸಿಗದಿದ್ದರೆ?’

“”ಡೊನೇಶನ್‌ ಸೀಟ್‌ಗೆ ನಾಳೆ ಅಡ್ವಾನ್ಸ್‌ ಕೊಟ್ಟು ರಿಸರ್ವ್‌ ಮಾಡಿಸೋಣ” ಮಗಳೇನೋ ತುಂಬ ಕ್ಯಾಜುಯಲ್‌ ಆಗಿ ಎಂದಿದ್ದಳು.

ಅಪ್ಪಗೆ ಇದು ಹೇಗೆ ಕ್ಯಾಜುಯಲ್‌ ಆಗಲು ಸಾಧ್ಯ?
ತುಂಬ ಲವಲವಿಕೆಯಿಂದ ಹೊಳೆವ ಮಗಳ ಮುಖ ತಮ್ಮ ಆರ್ಥಿಕ ಸ್ಥಿತಿಗೆ ಸವಾಲಾಗಿ ಇವತ್ತು ಅವರಿಗೆ ಅಪಹಾಸ್ಯ ಮಾಡುತ್ತಿತ್ತು. ಒಳಗೊಳಗೆ ಕೋಪ ತಳಮಳಿಸಿತು. ಆದರೂ ಹತ್ತಿಕ್ಕಿಕೊಂಡು ಸಮಚಿತ್ತದಿಂದ “”ಅದೇನು ಮೆಡಿಕಲ್‌? ಅದು ಸಿಗದಿದ್ದರೆ ಇಂಜಿನಿಯರಿಂಗ್‌ ಏಕಾಗಬಾರದು?” ಎಂದಾಗ ಕಂಪಿಸುವ ಸರದಿ ಮಗಳದಾಗಿತ್ತು. “”ಇಂಜಿನಿಯರಿಂಗಾ? ಸತೂÅ ಅದು ಬೇಡ. ಲಕ್ಷ ಸಂಬಳ ಬರುತ್ತೇ ಅಂದರೂ ಇಂಜಿನಿಯರ್‌ ಆಗಲ್ಲ” ಎಂದಿದ್ದಳು ಹಠದ ಧ್ವನಿಯಲ್ಲಿ. ಅವಳಿಗೆ ಮೆಡಿಕಲ್‌ ಹಠ ಅಲ್ಲ ಒಂದು ಆದರ್ಶ. ಡಾ. ಕೊಟ್ನೀಸ್‌ ಚಿತ್ರದ ಸಿಡಿ ನೋಡಿ ಸಣ್ಣಾಕಿ ಇರುವಾಗಲೇ ತುಂಬಾ ಪ್ರಭಾವಿತಳಾಗಿದ್ದಳು. ತಾನೂ ಅಂಥ ಡಾಕ್ಟರ್‌ ಆಗಬೇಕು. ಜನ ಸೇವೆ ಮಾಡಬೇಕು ಎಂಬ ಅವಳ ಅಂದಿನ ನಿರ್ಧಾರ ಈಗೀಗ ಇನ್ನೂ ಗಟ್ಟಿಯಾಗಿತ್ತು.

ತನ್ನದೇ ಕನಸಿನ ಲೋಕದಲ್ಲಿ ಇರುವ ವಾರುಣಿಗೆ “ಮೆಡಿಕಲ್‌ ಸಿಗದಿದ್ದರೆ ಇಂಜಿನಿಯರಿಂಗ್‌ ಸೇರಿಕೋ’ ಎಂದ ಅಪ್ಪನ ಮಾತು ಹೇಗಾಗಿರಬೇಡ? ಭವಿಷ್ಯವೇ ಭಗ್ನಗೊಂಡಂತೆ ಆವೇಶಗೊಂಡಳು. ಮಾತಿಗೆ ಮಾತು ಬೆಳೆಯಿತು. ನರ್ಸ್‌ ಆಗುತ್ತೀನಿ ಎಂದಾಗ ಅಪ್ಪಗೆ ಎಂದೂ ಇಲ್ಲದ ಕೋಪ ಬಂದಿತ್ತು.

“”ನಿನ್ನ ಹಣೆಬರಹ” ಎಂದು ಕೂಗಿ ಹೊರನಡೆದಿದ್ದರು.

ರಾಧಮ್ಮನೂ ಚಕಿತಳಾದಳು. ಮಗಳೂ ಅಂದರೆ ಆಕಿಗೆ ಎಲ್ಲಿಲ್ಲದ ಕಕ್ಕುಲತೆ, ಪ್ರೀತಿ. ತಂದೆಗೂ ಅಷ್ಟೆ . ದಿನವೆಲ್ಲ ದುಡಿದು ಸುಸ್ತಾಗಿ ಮನೆಗೆ ಬಂದಾಗಲೂ ಮಗಳು ಅಪ್ಪ ಎಂದರೆ ಸಾಕು ಮಗಳೇ ಎನ್ನುತ್ತ ವಾತ್ಸಲ್ಯದಿಂದ ಅವಳ ತಲೆ ಸವರಿ ಮಾತಿಗೆ ಹಚ್ಚುವರು. ಅವಳ ಮಾತಿಗೆ ಮನಸಾರೆ ನಕ್ಕೇ ತಮ್ಮ ರೂಮಿಗೆ ಹೋಗುವುದು. ಆದರೆ ಈ ದಿನ ಮಗೂ ಮೇಲೆ ರೇಗಿದ್ದು ರಾಧಮ್ಮನಿಗೆ ಆಘಾತವಾಗಿತ್ತು. ಇಡೀ ಮನೆಗೆ ಮಂಕು ಕವಿದಿತ್ತು. ಮಗಳ ಬಳಿ ಹೋಗಿ ಸಂತೈಸುವ ಶಕ್ತಿಯೂ ಇಲ್ಲದಂತೆ ನಿಸ್ತೇಜಳಾಗಿ ಕುಳಿತಳು. ಮಾರಿ ಊದಿಸಿಕೊಂಡು ಕಣ್ಣಲ್ಲಿ ನೀರು ತುಂಬಿಕೊಂಡು ಕುಳಿತಿದ್ದ ಮಗಳನ್ನು ಸಮಾಧಾನ ಮಾಡುವ ಗೊಡವೆಗೂ ಹೋಗಲಿಲ್ಲ.

ಈ ಮಗಳು ಆ ಗಂಡ ಇವರಿಬ್ಬರ ಮಧ್ಯೆ ರಾಧಮ್ಮ ನಜ್ಜುಗುಜ್ಜಾಗಿದ್ದರು. “ಒಬ್ಬಳೇ ಮಗಳೆಂದು ಅಚ್ಚ ಮಾಡಿ ಈಗ ಕೂಗಾಡಿದರೆ ಏನ್‌ ಬಂತು. ನಾನು ಡಾಕ್ಟರ್‌ ಆಗುತ್ತೀನಿ ಅಂತ ಎಲ್ಲರ ಮುಂದೆ ಕೊಚ್ಚಿಕೊಂಡು ಮೆರೀತಿದ್ದಾಳೆ. ಹಗಲೂ ರಾತ್ರಿ ಓದಿ ಕಾಲೇಜಿಗೇ ಫ‌ಸ್ಟ್‌ ಬಂದಿದ್ದಾಳೆ. ಇನ್ನೂ ರಿಸಲ್ಟ್ ಬಂದಿಲ್ಲ. ಈಗಲೇ ಏಕೆ ಇದೆಲ್ಲ?’ ಎಂದುಕೊಂಡು

“”ಅಲ್ಲೇ ಗೌರ್ನಮೆಂಟ್‌ ಸೀಟು ಸಿಕ್ಕರೆ ಓದಿಸುತ್ತಾರೆ. ಅದಕ್ಯಾಕೆ ಈಗಿನಿಂದಲೇ ಈ ರಗಳೆ?” ಎಂದು ಏನೋ ಹೇಳಲು ಬಂದ ತಾಯಿಯ ಕೈಗಳನ್ನು ಕೊಡವಿ… “”ನಿನ್ನಂತೆ ನನ್ನೂ ಅಡಿಗಿ ಮನೆಗೆ ಕಟ್ಟಿ ಹಾಕಬೇಕೂಂತ ಮಾಡೀಯೇನು? ನಾನು ಡಾಕ್ಟರ್‌ ಆಗೋದನ್ನು ನಿನಗೂ ಸಹಿಸೋಕೆ ಆಗಲ್ಲ. ಹೊಟ್ಟೆ ಉರಿಯು ತ್ತಲ್ಲಾ?” ಎಂದಳು ವಾರುಣಿ ಹಂಗಿಸುವಂತೆ.

ಮಗಳ ರೋಷಾವೇಶದ ಮಾತು ಆಗಲೂ ತಾಯಿಗೆ ನಗು ತರಿಸಿತ್ತು. ಈ ಹುಡುಗಿಗೆ ಏನು ಆವೇಶ, ಏನು ಆಕ್ರೋಶ? ನಗು ಬಂತು. ನಕ್ಕರೆ ಮಗಳು ತನ್ನ ಜಜ್ಜೆà ಬಿಡುತ್ತಾಳೆ ಎಂದು ಅದನ್ನು ತಡಕೊಂಡು “”ಮೆಡಿಕಲ್ಲೇ ಓದು ಅವರೇನೂ ಬ್ಯಾಡ ಅಂದರೇನು?” ಎಂದಳು.

“”ನಾಟಕ ಸಾಕು ಮಾಡೂ ಅಂತ ಹೇಳು ನಿನ್ನ ಗಂಡಗೆ. ಮೆಡಿಕಲ್‌ ಓದು ಅಂತಾರೆ. ಡೊನೇಷನ್‌ ಕೊಡೋಕಾಗಲ್ಲ ಅಂತಾರೆ ಏನರ್ಥ?”

ಸಿಟ್ಟಿನ ಆವೇಗದಲ್ಲಿ ಪ್ರೀತಿಯ ಅಪ್ಪ ಮಗಳಿಗೆ ಅಮ್ಮನ ಗಂಡನಾಗಿ ಬಿಟ್ಟಿದ್ದ.

“”ಡೊನೇಷನ್‌ ಫೀಜು ಅದೂ ಇದೂ ಅಂತ ಒಟ್ಟು ಅರುವತ್ತೆಪ್ಪತ್ತು ಲಕ್ಷ ಬೇಕಂತೆ. ಅದು ಹ್ಯಾಗೆ ಸಾಧ್ಯಾ? ನಿಮ್ಮಪ್ಪನ ಸಂಬಳ ಎಷ್ಟು ಗೊತ್ತಾ?”

“”ಎದುರು ಮಹಡಿಮನೆ ಮಲ್ಲಣ್ಣ ಅಂಕಲ್‌ ಸಂಬಳ ಗೊತ್ತು. ಅಪ್ಪಗಿಂತ ಕಡಮಿ. ಡೊನೇಷನ್‌ ಕೊಟ್ಟು ಸುಜಾತಾನ್ನ ಮೆಡಿಕಲ್‌ಗೆ ಸೇರಿಸಿಲ್ಲೇನು? ಅಪ್ಪ ಅಂದರೆ ಹಾಗೆ ಇರಬೇಕು.”

“”ಹೌದೇ, ಆದರೆ ಅವರ ಮನೆ ರೇಡ್‌ ಆಗಿ ಪೊಲೀಸನೋರು ಅವರನ್ನು ಹಿಡಕೊಂಡು ಹೋಗಿದ್ದರು ಅನ್ನೋದು ನಿಂಗೆ ಗೊತ್ತಲ್ಲ…?”

“”ಈಗೇನು ಅವರು ಜೇಲಲ್ಲಿ ಇದ್ದಾರೇನು?” ಎಂದು ಅಮ್ಮನನ್ನು ತೀಕ್ಷ್ಣವಾಗಿ ದಿಟ್ಟಿಸಿ “”ಅಪ್ಪನ್ನ ಹ್ಯಾಗಾದರೂ ಒಪ್ಪಿಸೇ ಅಮ್ಮ” ಎಂದಳು ಮಗಳು ಅಮ್ಮನ ಹೆಗಲಿಗೆ ಜೋತು ಬಿದ್ದು…

ಮಗಳ ಕಂಗಳಲ್ಲಿ ತುಂಬಿದ್ದ ಆಸೆಯನ್ನು ನೋಡಿ ರಾಧಮ್ಮನ ಕರುಳು ಮಿಡಿಯಿತು. ಆದ್ರìರಾಗಿ “”ನಿನ್ನ ಬಿಟ್ಟು ನಮಗೆ ಯಾರಿದ್ದಾರೆ ಕಂದ? ರಿಸಲ್ಟ್ ಬರಲಿ. ಅಪ್ಪನ ಜತೆ ಮಾತಾಡುತ್ತೀನಿ?” ಎಂದು ಅಂತಃಕರಣದಿಂದ ತಲೆ ನೇವರಿಸುತ್ತಾ ಸಮಾಧಾನಪಡಿಸಿದಳು.

ಅವಳಿಗೆ ಗಂಡನೇನೂ ಹೊಸಬನಲ್ಲ. ಮದುವೆಯಾದ ಮೊದಲ ರಾತ್ರಿಯಿಂದಲೇ ಮೈ ಚಳಿ ಬಿಟ್ಟು ಹೊಂದಿಕೊಂಡು ಬಾಳಿದವಳು. ಕಷ್ಟಸುಖ ಹಂಚಿಕೊಂಡವಳು. ಕಚೇರಿಯ ಸಂಕಷ್ಟವನ್ನೂ ಗಂಡ ಹಂಚಿಕೊಂಡಿದ್ದಾರೆ. ಮಗಳು ಅಂದರೆ ಅವರಿಗೆ ಕಡಮಿ ಪ್ರೀತೀನಾ? ಈಗ ಮೆರಿಟ್‌ ಸೀಟು ಸಿಗದಿದ್ದರೆ ಡೊನೇಶನ್‌ ಸೀಟಿಗೆ ತಾನೂ ಬಲವಂತ ಮಾಡಿ ಒಪ್ಪಿಸಬೇಕು ಎಂದು ನಿರ್ಧರಿಸಿದಳು.

ಸಂಜೆ ಮನೆಗೆ ಗಂಡ ಹಿಂತಿರುಗಿದರು. ಕಾಫಿ ಕೊಟ್ಟು… ತಾನೂ ಒಂದು ಕೈಲಿ ಕಾಫಿ ಲೋಟ ಹಿಡಿದು ಸೋಫಾ ಮೇಲೆ ಪಕ್ಕ ಕುಳಿತಳು. ನಾಗಭೂಷಣ ಮಾತು ತೆಗೆದರು.

“”ರಾಜಕುಮಾರಿ ಸಿಟ್ಟ ಕಡಮಿ ಆತೇನು?”

ಬೆಳಗ್ಗಿನ ಟೆನ್ಶನ್‌ ಕಡಮಿ ಆಗಿ ಗಂಡ ಮಾಮೂಲು ಆಗಿದ್ದರಿಂದ ರಾಧಮ್ಮ ನೆಮ್ಮದಿಗೊಂಡಳು…
“”ನಿಮ್ಮದು ಕಡಮಿ ಆಗೆÂàದಲ್ಲ ಅಷ್ಟು ಸಾಕು” ಎಂದು ರಾಧಮ್ಮ ನಕ್ಕಾಗ ಅವರೂ ನಕ್ಕರು.
“”ಅಲಿÅ ಮಾತಿಗೆ ಮೊದಲು ಡಾಕ್ಟ್ರೇ ಅಂತಾ ಕರೀತಾ ನೀವೇ ಅವಳನ್ನ ಆಗಲೇ ಡಾಕ್ಟರ್‌ ಮಾಡಿ ಕೂಡಿಸೀರಿ. ಈಗ ಆಗೋಲ್ಲ ಅಂಬೋದು ಎಷ್ಟು ಸರಿ?”

“”ಹುಡುಗಿ ಬುದ್ಧಿವಂತೆ ಎನ್ಕರೇಜ್‌ ಮಾಡೋದಕ್ಕೆ ಹಾಗೆ ಅಂದೆ.”
“”ಈಗ ಅನುಭವಿಸಿ. ಅಲಿÅà ಅವಳು ಅದನ್ನೇ ನಂಬಿ ಕೂತಾಳೆ. ದೊಡ್ಡ ಡಾಕ್ಟರ್‌ ಆಗಬೇಕೂ ಅಂಬೋ ಕನಸಿನಾಗ ಸರಿಯಾಗಿ ನಿದ್ದಿ ಮಾಡಿ ಎಷ್ಟು ದಿನ ಆತೋ? ಗೆಳತ್ಯಾರ ಮುಂದೆ ಮೆಡಿಕಲ್‌ ಸೇರುತ್ತೀನಿ ಅಂತ ಜಂಬ ಕೊಚ್ಚಿಕೊಂಡಾಳೆ. ಈಗಲೇ ಡಾಕ್ಟರ್‌ ಅಂಬೋ ತರಹ ನಡಕೊತಿದ್ದಾಳೆ. ಕಡೆ ಗಳಗ್ಯಾಗೆ ಡೊನೇಶನ್‌ ಕಟ್ಟೋಕಾಗಲ್ಲ ಅಂದರೆ ಅವಳಿಗೆ ಹೇಗಾಗಬೇಡ? ಯೋಚನೀ ಮಾಡೀರೇನು?”

“”ರಾಧಾ, ಡೊನೇಶನ್‌ ಅಂದರೆ ಹಾಸ್ಯ ಅಲ್ಲ ಅದು ಎಷ್ಟು ಅಂತ ಆದರೂ ನಿನಗೆ ಗೊತ್ತೇನು?” ಕಣ್ಣು ಕಿರಿದಿಸಿ ಕೇಳಿದರು. ಅವರ ಮಾರಿ ನೋಡಿದ್ದರೆ ಗಂಡ ಎಷ್ಟು ತತ್ತರಿಸಿ ಹೋಗಿದ್ದಾರೆ ಎಂಬುದು ತಿಳಿಯುತ್ತಿತ್ತು. ಆದರೆ ಮಗಳ ಹಠ ಗಂಡನ ಮಾರಿಯ ದುಗುಡ ಅರ್ಥ ಮಾಡಿಕೊಳ್ಳಲು ಬಿಡಲಿಲ್ಲ.

“”ಅವಳ ತಲೆ ಒಳಗೆ ಕನಸು ತುಂಬೋ ಮೊದಲು ಇದನ್ನು ಯೋಚಿಸಬೇಕಿತ್ತು. ಈಗ ಅವಳಿಗೆ ಶಾಕ್‌ ಆಗ್ಯದ.”

ನಾಗಭೂಷಣ ಸುಮ್ಮನೆ ಕುಳಿತರು ವಿವರ್ಣರಾಗಿ. ಹುಡುಗಿ ನಿರಾಶೆಗೊಂಡರೆ ಏನು ಮಾಡಿಕೋತಾಳ್ಳೋ ಎಂಬ ಭಯ ಉಂಟಾಗಿತ್ತು. ಭವಿಷ್ಯಕ್ಕೆ ಗ್ರಹಣ ಬಡಿದಂತೆ ಖನ್ನರಾದರು.

ಯೋಚಿಸಿದಷ್ಟೂ ಸಮಸ್ಯೆ ಕಗ್ಗಂಟಾಗತೊಡಗಿತ್ತು… ಡಾಕ್ಟರ್‌ ಆಗಬೇಕೂ ಅನ್ನೋದನ್ನು ಮಗಳು ಇಷ್ಟು ಸೀರಿಯಸ್‌ ಆಗಿ ತಗೋತಾಳೆ ಅಂಬೋ ಯೋಚನೆ ಅವರಿಗೆ ಬಂದಿರಲಿಲ್ಲ. ಚೆನ್ನಾಗಿ ಓದಿದರೆ ಮೆಡಿಕಲ್‌ ಸಿಗುತ್ತದೆ ಡಾಕ್ಟರಾಗಬೇಕು ನೋಡು ಎಂದು ಆ ಎಳೇ ಮನಸ್ಸನ್ನು ಒತ್ತಡಕ್ಕೆ ಸಿಲುಕಿಸಿದ್ದೇ ತಪ್ಪಾಯೆ¤à? ಇಲ್ಲಸಲ್ಲದ ಆಸೆ ಏಕೆ ಹುಟ್ಟಿಸಿದೆ? ಮಕ್ಕಳ ಮನಸ್ಸಿನ ಸೂಕ್ಷ್ಮತೆ ಅರಿಯಲಿಲ್ಲ ಎಂದು ವಿಷಣ್ಣರಾಗಿ ತಳಮಳಿಸಿದರು.

ಆದರೆ ವಾರುಣಿಗೆ ಇದು ಸಮಸ್ಯೆಯೇ ಅಲ್ಲ. “”ನಿಮಗೆ ಇರೋದು ನಾನೊಬ್ಬಳೇ ಮಗಳಲ್ಲೇನು? ಈ ಮನೆ ನನಗೇನೇ ಅಲ್ವಾ ಅಮ್ಮ?” ಎಂದು ಅಮ್ಮನನ್ನು ಕೇಳಿದ್ದಳು ನೇರವಾಗಿ…

ರಾಧಮ್ಮ ಹಿಂದುಮುಂದು ತಿಳಿಯದೆ ಮಗಳ ಮಾರಿಯನ್ನೇ ನೋಡತೊಡಗಿದರು… “ಹಾಗ್ಯಾಕೆ ನೋಡುತಿ? ನನ್ನ ಮ್ಯಾರಿ ಮೇಲೇನೂ ಗೊಂಬಿ ಕುಣಿತಾ ಇಲ್ಲ… ಮನೆ ತಗಂಡು ನಾನೇನ್‌ ಮಾಡಲಿ? ಅದೇ ಡಾಕ್ಟ್ರಾದರೆ ಇಂಥ ಒಂದಲ್ಲ ಹತ್ತು ಮನೆ ಕಟ್ಟಿಸುತ್ತೀನಿ… ಫ್ಯಾಮಿಲಿಗೆ ದೊಡ್ಡ ಪ್ರತಿಷ್ಠೆ. ಇನ್ನೂ ಅತಿ ಮುಖ್ಯ ಅಂದರೆ ನಿಮಗೆ ಚಲೋ ಅಳಿಯಾ ಸಿಗುತಾನೆ. ಇನ್ನೇನೆ ಅಮ್ಮ?” ಎಂದಳು ಹಾಸ್ಯದ ಧ್ವನಿಯಲ್ಲಿ…

ಹರೆಯದ ಮನಸ್ಸಿನ ಹುಚ್ಚು ಆಸೆ ರಾಯರು ಬಲ್ಲರು. ಕನಸು ಕಟ್ಟತೊಡಗುತ್ತದೆ. ಕನಸು ಸಾಗರವಾಗಿ ಅಲ್ಲಿ ತೇಲುವ ಮನಸ್ಸಿಗೆ ಉಳಿದದ್ದು ಎಲ್ಲ ಗೌಣ… ಕಾಣುವುದು ದಡವಿಲ್ಲದ ತೆರೆತೆರೆಯಾಗಿ ಅಪ್ಪಳಿಸುವ ನೀರು. ಅಪ್ಪ ಅಮ್ಮ… ಗತಿ ಸ್ಥಿತಿ ಅದರ ಕಲ್ಪನೆಯೂ ಇಲ್ಲ. ಅಂದುಕೊಂಡಂತೆ ಭವಿಷ್ಯ ಇರಲ್ಲ. ಮಗಳ ತಾಳಕ್ಕೆ ಕುಣಿದರೆ ಮುಂದೆ ವೃದ್ಧಾಪ್ಯದಲ್ಲಿ ತಮ್ಮ ಗತಿ ಏನು?

ಅಪ್ಪನ ಮೌನವನ್ನು , ಚಿಂತೆಯನ್ನು ಮಗಳು ತಿಳಿದಳು.

“”ನಾನು ಮಗ ಆಗಿದ್ದರೆ ಇಷ್ಟು ಯೋಚನೆ ಮಾಡುತ್ತಿರಲಿಲ್ಲ ಅಲ್ಲೇನಪ್ಪ? ಗಂಡುಮಗ ಅಂದರೆ ನೀವು ಬ್ಯಾಂಕಿನಾಗ ಇಡೋ ಫಿಕ್ಸೆಡ್‌ ಡಿಪಾಸಿಟ್ಟ ಅಲ್ಲೇನು?” ಎನ್ನುತ್ತ ಸೆಟಗೊಂಡಂತೆ ಹೊರಟಿದ್ದಳು.
ಆದರೂ ಅವಳಿಗೆ ಅಮ್ಮನೇ ಗತಿ. ಅವಳನ್ನೇ ಕಾಡಿಬೇಡಿ ಹಠ ಸಾಧಿಸಬೇಕು.

ಮತ್ತೆ ಬಂದು ಅಮ್ಮಗೆ ಜೋತು ಬಿದ್ದು “”ಅಮ್ಮ ಇವತ್ತಿನವರೆಗೂ ನಿಮ್ಮ ಮನಸ್ಸಿಗೆ ವಿರುದ್ಧವಾಗಿ ನಡಕೊಂಡೀನೇನು? ನನ್ನ ಮೇಲೆ ನಂಬಿಕೆ ಇಡಿ.. ಭವಿಷ್ಯದ ಬಗ್ಗೆ ಚಿಂತೆ ಬಿಡಿ… ನಿಮ್ಮನ್ನ ನೋಡಿಕೊಳ್ಳೋ ಜವಾಬ್ದಾರೀ ನನಗೂ ಇದೆ… ಆಣಿ ಮಾಡಿ ಹೇಳುತ್ತೀನಿ… ಮದುವೆ ಆದರೂ ಗಂಡ ನಮ್ಮ ಮನೆಯಲ್ಲಿ ಇರಬೇಕು. ಅಂಥಾ ಗಂಡನ್ನ ಹುಡುಕಿ ನೀವೇ ಮದುವೆ ಮಾಡಿ. ಕುದುರೆಯಾದರೂ ನಾನು ತಾಳೀ ಕಟ್ಟಿಸಿಕೊಂಬಾಕಿ” ಎಂದಳು. ಈ ಹಾಸ್ಯದ ಮಾತಿನಲ್ಲೂ ಅವಳು ತನ್ನ ದೃಢವಾದ ಅಭಿಪ್ರಾಯವನ್ನೇ ಮಂಡಿಸಿದ್ದಳು…

ನಾಗಭೂಷಣ ಮಗಳ ಮಾತನ್ನೇ ಗಂಭೀರವಾಗಿ ಚಿಂತಿಸಿದರು. ಮಗಳ ತರ್ಕ ಸರಿಯಾಗೇ ಇದೆ. ಮಗ ಆಗಿದ್ದರೆ ಇಷ್ಟು ಯೋಚನೆ ಮಾಡುತ್ತಿರಲಿಲ್ಲವೇನೋ? ತಮ್ಮ ಭದ್ರತೆಗಾಗಿ ಮಗಳ ಭವಿಷ್ಯ ಕಡೆಗಣಿಸುವುದೇ?
ಮಗಳ ಬಗ್ಗೆ ಕಳಕಳಿ, ಅನುಕಂಪ, ಅವಳ ಆಸೆ ತುಂಬಿದ ಬೊಗಸೆ ಕಂಗಳಲ್ಲಿ ಮೆಡಿಕಲ್‌ ಸೇರುಸಪ್ಪ ಅಂಬೋ ಬೇಡಿಕೆ. ಮನಸ್ಸು ಚುರ್‌ ಎಂದಿತು. ಜತೆಗೆ ತಮ್ಮ ಕೊನೆಗಾಲದ ಭದ್ರತೆಯ ಬಗ್ಗೆ ಆತಂಕ. ತ್ರಿಶಂಕು ಸ್ಥಿತಿ ಅಂದರೆ ಇದೇ ಇರಬೇಕು.

“”ಅವಳು ಬಹಳ ಹಠ ಹಿಡಿದಿದ್ದಾಳೆ. ಈಗಿನ ಹುಡುಗೀರ ಮನಸ್ಸು ಬಹಳ ಸೂಕ್ಷ್ಮ… ಹೋದ ವರ್ಷ ನಮ್ಮ ಪ್ರಸಾದನ ಕಸಿನ್‌ ಮಗಳಂತೆ. ಡೊನೇಶನ್‌ ಕಟ್ಟಿ ಮೆಡಿಕಲ್‌ಗೆ ಸೇರಿಸಲಿಲ್ಲ ಅಂತ ನೇಣು ಹಾಕ್ಕೊಂಡಳಂತೆ…” ಭಾರವಾದ ಧ್ವನಿಯಲ್ಲಿ ರಾಧಮ್ಮ ನೆನೆದಳು.

ಇಬ್ಬರೂ ಆ ಸುದ್ದಿ ಕೇಳಿ ಅಂದು ಮಿಡುಕಿದ್ದರು. ಅಲ್ಲೇ ಇದ್ದ ವಾರುಣಿ “”ಅದೆಂಥ ಹುಡುಗಿ… ಥೂ ಕವರ್‌x ಹೇಡಿ… ಸತ್ತು ಏನು ಸಾಧಿಸಿದಳು?” ಎಂದು ಆತ್ಮಹತ್ಯೆ ಮಾಡಿಕೊಂಡ ಹುಡುಗೀಗೆ ಛೀಮಾರಿ ಹಾಕಿದ್ದಳು. ಮಗಳ ಮಾತಲ್ಲಿ ಮರುಕದ ಒಂದು ಹನಿಯೂ ಇದ್ದಿಲ್ಲ. ಆತ್ಮಹತ್ಯೆ ಮಾಡಿಕೊಂಡ ಹುಡುಗಿ ತಮ್ಮ ಮಗಳ ತಿರಸ್ಕಾರದ ಮಾತು ಕೇಳಿಸಿಕೊಂಡಿದ್ದರೆ ತನ್ನ ದುಡುಕಿಗೆ ಇಡೀ ಜಗತ್ತೇ ಹೇಗೆ ಥೂ ಅನ್ನುತ್ತದೆ ಎಂದು ತಿಳಿದು ಎಷ್ಟು ಪಶ್ಚಾತ್ತಾಪ ಪಟ್ಟಿರುತ್ತಿದ್ದಳ್ಳೋ? ಅಪ್ಪ ಅಮ್ಮನ ದುಃಖ ಶಮನ ಮಾಡಲು ಮತ್ತೆ ಹುಟ್ಟಿ ಬರುತ್ತಿದ್ದಳೇನೋ.

ಈ ನೆನಪು ಅವರಿಗೆ ಧೈರ್ಯ ತಂದಿತ್ತು. ಆದರೂ ಸುಪ್ತಭಯ ಆ ನೆನಪು… ಕೆಂಡ ತುಳಿದಂತೆ, ಇಡೀ ದೇಹ ಸುಟ್ಟಂತೆ.

ಭಾವನೆಗಳು ತರ್ಕಕ್ಕೆ ನಿಲುಕುವುದಿಲ್ಲ. ಆವೇಶಕ್ಕೆ ನೀತಿ ನಿಯಮವಿಲ್ಲ. ಆ ಕ್ಷಣ ತೋಚಿದಂತೆ ನಡೆದುಹೋಗುತ್ತದೆ. ಈಗ ಮಗಳೂ ಹಠ ಹಿಡಿದಿದ್ದಾಳೆ. ಯಾಕೆ ಮಕ್ಕಳು ಅಪ್ಪ – ಅಮ್ಮನ ಕಷ್ಟ ಅರ್ಥ ಮಾಡಿಕೊಳ್ಳುತ್ತಿಲ್ಲ? ತಮ್ಮ ಮೇಲೆ ಸೇಡು ತೀರಿಸಿಕೊಳ್ಳುವಂತೆ ವರ್ತಿಸುತ್ತಾರೆ. ಏನು ಈ ಬ್ಲಾಕ್‌ವೆುàಲ್‌? ಏನಾದರೂ ಮಾಡಿಕೊಂಡರೆ? “ಥೂ ಕವರ್‌x ಹೇಡಿ, ಸತ್ತು ಏನು ಸಾಧಿಸಿದಳು…?’ ಮಗಳ ಆ ಮಾತುಗಳು. ಆದರೂ ಏನು ಮಾಡಿಕೋತಾಳ್ಳೋ ಎಂಬ ಆತಂಕ.

“”ಈಗಿನ ಮಕ್ಕಳಿಗೆ ಯಾವುದನ್ನೂ ಚಾಲೆಂಜಿಂಗ್‌ ಆಗಿ ಎದುರಿಸೋದು ಗೊತ್ತಿಲ್ಲ. ತುಂಬ ಸೂಕ್ಷ್ಮ. ವಾರುಣಿ ಚಾಮುಂಡಿ ಆಗ್ಯಾಳೆ. ನಮ್ಮ ಮಾತು ಕೇಳ್ಳೋ ಮನಃಸ್ಥಿತಿಯಲ್ಲಿಲ್ಲ. ಡೊನೇಶನ್‌ ಆಗಲ್ಲ ಅಂತ ಥಟ್‌ ಅಂತ ಅಂದುಬಿಟ್ರಿ. ನೋಡೋಣ ಪ್ರಯತ್ನಿಸುತ್ತೀನಿ ಅಂದರೆ ಅವಳ ಆಸೆಗೆ ಬುಡಕ್ಕೆ ಬೆಂಕಿ ಇಟ್ಟಂತೆ ಆಗುತ್ತಿರಲಿಲ್ಲ.” ಹೆಂಡತಿ ಅಂದಾಗ “ಹೌದಲ್ಲಾ ತಾನು ಸಹಿಸಬೇಕಿತ್ತು’ ಎಂದು ಅವರಿಗೆ ತಪ್ಪಿನ ಅರಿವಾಗಿತ್ತು. ಯೋಚಿಸುತ್ತ ಮನಸ್ಸಿನಲ್ಲಿ ಹೊಯ್ದಾಟ…

“ಇರೋದು ಒಂದು ಮನೆ. ಹುಚ್ಚು ಹುಡುಗಿ. ಒಂದಲ್ಲ ಹತ್ತು ಮನೆ ಕಟ್ಟಿಸುತ್ತೀನಿ ಅಂತಾಳೆ; ಇಡೀ ತಮ್ಮ ಜೀವಮಾನದ ಸಂಪಾದನೆ ಈ ಮನೆ. ಅವಳಿಗೆ ಅರ್ಥವಾಗುತ್ತಿಲ್ಲ. ಅವಳಿಗೋ ಪಾಪ ಮೆಡಿಕಲ್‌ ಸೇರುವ ಆಸೆ. ಈಗ ಅವಳು ವೆ‌ುಡಿಕಲ್‌ ಸೇರದಿದ್ದರೆ ಇನ್ನೆಂದೂ ಇಲ್ಲ. ಆದರೆ ಮನೆ ಇಂದಲ್ಲ ನಾಳೆ ಮತ್ತೆ ಕಟ್ಟಬಹುದು.’
“”ನಮಗೆ ವಯಸ್ಸಾಗ್ಯದೆ. ಮಗಳು ಇನ್ನೂ ಕಣ್ಣು ತೆರೆಯುವಾಕಿ. ಅವಳ ಹುಮ್ಮಸ್ಸಿಗೆ ಅಡ್ಡಿ ಮಾಡೋದು ಬ್ಯಾಡ. ದೇವರು ಇಟ್ಟಂಗೆ ಆಗ್ತದೆ… ಮನೆ ಮಾರಿ ಬಿಡ್ರಿ…” ಎಂದು ಸ್ಪಷ್ಟವಾಗಿ ರಾಧಮ್ಮ ಹೇಳಿದಳು…
“”ನೀನೂ ಹಾಗೇ ಹೇಳುತ್ತೀಯಾ?” ಎಂದು ಹೆಂಡತಿಯನ್ನು ಅಸಹಾಯಕರಾಗಿ ನೋಡಿದರು. ಅವಳ ಮೌನವೇ ಉತ್ತರವಾಗಿತ್ತು.

ಕೊನೆಗೆ ತಂದೆಗೂ ಅದೇ ಸರಿ ಎನ್ನಿಸಿತು.
“”ವಾರೂ” ಎಂದು ಅವಳ ರೂಮಿಗೆ ಸೀದಾ ಹೋದರು.
ಟಿವಿ ನೋಡುತ್ತಾ ಬೋರಲು ಮಲಗಿದ್ದ ಮಗಳನ್ನು “”ನೋಡಮ್ಮ ಸಿಟ್ಟಿನಾಗ ಒಂದು ಮಾತು ಅಂದೇ ಅಂತ ನೀನು ಅಸಮಾಧಾನ ಮಾಡಿಕೊಂಡು ದುಡುಕಬೇಡ. ಮಗಳೇ, ಎಲ್ಲ ಮಾಡಿರೋದು ನಿನಗಾಗಿ. ನೀನು…” ಎಂದು ಮಾತಿಗೆ ಪೀಠಿಕೆ ಹಾಕುತ್ತಿರುವಾಗಲೇ ವಾರುಣಿ ಅಪ್ಪನ ಮಾರಿ ನೋಡಿ “”ಹೆದರಿಕೋಬ್ಯಾಡ್ರೀ. ನೇಣು ಹಾಕ್ಕೊಂಬಲ್ಲ ಜೀವ ಅಗ್ಗ ಅಲ್ಲ ಅನ್ನೋದು ನನಗೆ ಗೊತ್ತು” ಎಂದಳು. ಅವಳ ಸಿಟ್ಟು ಇನ್ನೂ ಪ್ರಖರವಾಗಿತ್ತು.
ಅಪ್ಪ ಮಗಳ ತಲೆ ನೇವರಿಸುತ್ತಾ ಗದ್ಗದಿತರಾಗಿ “”ಇಲ್ಲಮ್ಮ ನೀನು ಮೆಡಿಕಲ್‌ ಓದಬೇಕು… ಓದಿಸುತ್ತೀನಿ… ಮೆರಿಟ್ನಾಗ ಸೀಟು ಸಿಗದಿದ್ದರೂ ಚಿಂತಿ ಬ್ಯಾಡ. ಮನೆ ಇಟುಗೊಂಡು ಏನ್‌ ಮಾಡಲಿ…?”

ಮಗಳು ದಿಗ್ಗನೆ ಎದ್ದು ಕುಳಿತಳು. ಮುಖದಲ್ಲಿ ಸಂಭ್ರಮ ಮಿಂಚಿತು. “ಅಪ್ಪಾ’ ಎಂದು ಅವರ ಕೊರಳಿಗೆ ತೋಳು ಹಾಕಿ “”ನನ್ನ ಅಪ್ಪ, ನಂಗೆ ಗೊತ್ತು ನೀನು ಹೀಗೇ ಮಾಡುತ್ತೀ ಅಂತ” ಹಿಗ್ಗಿನಿಂದ ಉತ್ಸಾಹದ ಚಿಲುಮೆ ಆದಳು. “”ಅಮ್ಮ… ಅಮ್ಮ” ಎಂದು ತಾಯಿಯೊಡನೆ ಬಹಳ ಜೋಷ್‌ನಲ್ಲಿ ಮಾತಾಡಿದಳು… “ತನ್ನ ಹಠ ಗೆದ್ದಿದೆ. ಮೆಡಿಕಲ್‌ ಓದಿ ಹೆಸರು ತರಬೇಕು. ಅಪ್ಪ ಅಮ್ಮನನ್ನು ಇಳಿವಯಸ್ಸಿನಲ್ಲಿ ಮಗನಾಗಿ ನೋಡಿಕೊಳ್ಳಬೇಕು’ ಎಂದುಕೊಂಡಳು. ಈಗ ಜಂಬದ ಕೋಮಲ ನೆನಪಾದಳು. “ನೀನೆಲ್ಲಿ ಮೆಡಿಕಲ್‌ ಸೇರಿ¤àಯಾ!’ ಎಂದು ಕೊಂಕು ನುಡಿಯುವ ಅವಳನ್ನು ಹಂಗಿಸಬೇಕು.

ಬಿಂಕದಿಂದ ಮಲಗಿದಳು, ನಿದ್ದೆ ಬರಲಿಲ್ಲ. ಬೆಳಗಿಗಾಗಿ ಕಾದಳು.

ಗಂಡ – ಹೆಂಡತಿ ಇಬ್ಬರೂ ಮಲಗಿದರು. ನಿದ್ದೆ ಸುಳಿಯಲಿಲ್ಲ. ಮನೆ ಮಾರುವ ನಿರ್ಧಾರವೂ ಗಟ್ಟಿಯಾಯಿತು. ಎಲ್ಲ ಮಾಡುತ್ತಿರುವುದೂ ಮಗಳಿಗಾಗಿ. ಆದರೆ ಭಯ. ನಾಳೆ…?
ಆಗಲೂ ಒಂದು ಮಿಣುಕು ಆಸೆ. “ಮಗಳಿಗೆ ಮೆರಿಟ್‌ ಸೀಟು ಸಿಕ್ಕರೆ ಸಮಸ್ಯೆ ಇಲ್ಲ. ಸಿಗದಿದ್ದರೆ?’

“”ನಮ್ಮ ಫ್ರೆಂಡ್ಸ್‌ ಎಲ್ಲ ಇಂಜಿನಿಯರಿಂಗ್‌ ಸೇರ್ತಾ ಇದ್ದಾರೆ, ನಾನು ಅದಕ್ಕೇ ಸೇರುತ್ತೀನಿ” ಅಂದರಂತೂ ತಮಗಿಂತ ಸುಖೀ ಮತ್ತೂಬ್ಬರಿಲ್ಲ… ಯಾವುದೇ ಕಾರಣಕ್ಕೂ ಮಗಳ ಇಚ್ಛೆಗೆ ವಿರುದ್ಧವಾಗಿ ನಡೆಯಬಾರದು…
“”ಅಂದ ಹಾಗೆ ನಾಳೆಯೇ ಡೊನೇಶನ್‌ ಸೀಟಿಗೆ ಅಡ್ವಾನ್ಸ್‌ ಕೊಡಬೇಕಲ್ವಾ?”

ಬೆಳಗ್ಗೆ ಎದ್ದವರೇ ಏಜೆಂಟಿಗೆ ಫೋನ್‌ ಮಾಡಿದರು. ಆತ ಹೇಳಿದ “”ಸರ್‌ ಒರಿಜಿನಲ್‌ ಸೇಲ್‌ ಡೀಡ್‌ ತಂದು ಬಿಡಿ. ಅಗ್ರಿಮೆಂಟ್‌ ಎಲ್ಲ ರೆಡಿ ಮಾಡಿಸಿ ಇಟ್ಟಿರುತ್ತೀನಿ. ಸೈನ್‌ ಮಾಡಿ ಹತ್ತು ಲಕ್ಷ ತಗೊಂಡು ಹೋಗಿ. ಉಳಿದ ಅಮೌಂಟ್‌ ನಾಳೆ ನಾಡಿದ್ದು ರಿಜಿಸ್ಟ್ರೇಷನ್‌ ಟೈಮಲ್ಲಿ” ಎಂದು ಫೋನ್‌ ಇಟ್ಟ.

ವಾರುಣಿ ಎದ್ದವಳೇ ಎಂದೂ ಇಲ್ಲದ ಸೀರೆ ಉಟ್ಟುಕೊಂಡು ಹೂ ಮುಡಿದು ದೇವಸ್ಥಾನಕ್ಕೆ ಹೋಗುವಂತೆ ಗೆಳತಿ ಶೈಲಜಾ ಬಂಗಲೆಗೆ ಓಡಿದಳು. ಅಲ್ಲಿ ಗೆಳತಿಯರು ಸೇರಿರುತ್ತಾರೆ. ತಾನು ಡೊನೇಶನ್‌ ಕೊಟ್ಟು ಸೀಟ್‌ ರಿಸರ್ವ್‌ ಮಾಡೋ ಸಂಭ್ರಮದ ವಿಷಯ ಡಂಗುರ ಹೊಡೆಯಬೇಕು. ಕೋಮಲಳ ಜಂಬ ಮುರೀಬೇಕು. ಅವಳ ಮಂಕು ಮಾರಿ ನೋಡಬೇಕು. ಏನೇನೋ ಯೋಚನೆಗಳು… ಸೋಡಾಬಾಟಲ್‌ ತೆಗೆದಾಗ ಚಿಮ್ಮುವ ಬುರಗು ನೀರಂತೆ.
ಮನೆ ಬಂತು. ಗಾಡಿ ನಿಲ್ಲಿಸಿ ದಡದಡ ಮೆಟ್ಟಿಲೇರಿದಳು. ಗೆಳತಿಯರು ಇದ್ದರು. ಆದರೆ ಮಾತಿಲ್ಲ. ಕತೆ ಇಲ್ಲ. ನೀರಸ ಮೌನ.

ಏನಿದು? ಏನಾಗಿದೆ ಇವರಿಗೆ? ಬೆರಗಿಂದ “”ಏನೆÅà? ಯಾರಿಗೆ ಶ್ರದ್ಧಾಂಜಲಿ?” ಎನ್ನುತ್ತಾ ಎಂದಿನ ತಮಾಷೆ ಧಾಟಿಯಲ್ಲಿ ಅವರತ್ತ ನೋಡುತ್ತಿದ್ದಂತೆ ಆ ಗೆಳತಿಯರ ಜೋಲು ಮುಖ. ಗರಬಡಿದಂತೆ ನಿಂತುಬಿಟ್ಟಳು. ಎಲ್ಲರ ಕಣ್ಣಲ್ಲಿ ದುಃಖ ಮಡುವುಗಟ್ಟಿದೆ.

“”ನಿನಗಾಗಿ ಕಾಯುತಾ ಇದ್ದೆವು. ಬಾ ಕೋಮಲಾಳ ಮನೆಗೆ ಹೋಗೋಣ” ಎಲ್ಲರೂ ಎದ್ದರು.
“”ಏನು? ಆ ಸೊಕ್ಕಿನ ಸುಬ್ಬಮ್ಮ ಪಾರ್ಟಿ ಇಟ್ಟುಕೊಂಡಾಳಾ?” ಕುಟುಕುವಂತೆ ಕೇಳಿದಳು. ಕೋಮಲಾ ಅಂದರೆ ವಾರುಣಿಗೆ ಎಲ್ಲಿಲ್ಲದ ಅಸಹನೆ, ಸಿಡುಕು.

“”ನಿನ್ನೆ ರಾತ್ರಿ ಸ್ಕೂಟಿ ಆಕ್ಸಿಡೆಂಟ್‌ ಆಗಿ ಹೋಗಿಬಿಟ್ಟಳು…”
“”ಏನು? ಏನು?” ಒಂದು ಕ್ಷಣ. ಅರ್ಥವಾಗು ತ್ತಿದ್ದಂತೆ ವಾರುಣಿ ಹೌಹಾರಿದಳು. ಸ್ತಬ್ಧಳಾದಳು. ಕುಸಿದು ಕುಳಿತುಬಿಟ್ಟಳು… “”ನನಗೇಕೇ ಮೆರಿಟ್‌ ಸೀಟು, ಅದೆಲ್ಲ ನಿಮ್ಮಂಥೋರಿಗೆ. ಡೊನೇಶನ್‌ ಕೊಟ್ಟಿàನಿ” ಕೋಮಲಾಳ ಹಂಗಿಸುತ್ತಾ ಹೇಳಿದ ಮಾತು ಧ್ವನಿಸುತ್ತಿದೆ. ಏನು ಅಹಂಕಾರ!

“”ಡಿಗ್ರಿ ಕೊಂಡುಕೋತೀಯಾ? ಪೇಷಂಟ್‌ಗಳು ಸಾಯ್ತಾರೆ” ಎಂದು ವಾರುಣಿ ಕೆಣಕಿದಾಗ
“”ನನ್ನ ನರ್ಸಿಂಗ್‌ಹೋಮ್‌ಗೆ ಫಾರಿನ್‌ ರಿಟರ್ನ್ಡ್ ಸರ್ಜನ್‌ರನ್ನು ಅಪಾಯಿಂಟ್‌ ಮಾಡಿ ಕೋತೀನಿ” ಎಂದಿದ್ದಳು ಗತ್ತಿನಿಂದ ಕೋಮಲಾ.

ಏನು ಹಮ್ಮು! ಏನು ಬಿಮ್ಮೂ!!

ಆ ಮಾತುಗಳು ಮತ್ತೆ ಮತ್ತೆ ಪ್ರತಿಧ್ವನಿಸಿದವು. ಆ ಗೆಳತಿಯ ಸೊಕ್ಕಿನ ಮುದ್ದು ಮುಖ ಕಣ್ಣ ಮುಂದೆ ಸುಳಿದು ದುಃಖ ಉಮ್ಮಳಿಸಿ ಬಂತು. ಬಿಕ್ಕಿ ಬಿಕ್ಕಿ ಅತ್ತುಬಿಟ್ಟಳು.

ಆದದ್ದೇನು? ಕಾರಿದ್ದರೂ ಸ್ಕೂಟಿಯಲ್ಲಿ ಏಕೆ ಹೋದಳು? ಏನು ಈ ಅನಾಹುತ?
ಅವಳ ಅಪ್ಪ ಕೋಟ್ಯಧಿಪತಿ. ಐವತ್ತು ಲಕ್ಷ ಡೊನೇಶನ್‌ನೂ° ಕಟ್ಟಿದ್ದಾರೆ. ಸೂಟ್‌ ಧರಿಸಿ ಸಿಗರೇಟ್‌ ಹೊಗೆ ಉಗುಳುತ್ತಾ ಕಾರ ಬಳಿ ನಡೆದಿದ್ದ ಅವಳ ಅಪ್ಪನ ಚಿತ್ರ ಕಣ್ಣ ಮುಂದೆ ಕಟ್ಟಿತು.

ಈಗ ಇದನ್ನು ಹೇಗೆ ಸಹಿಸುತ್ತಾರೆ? ಒಂದು ಕ್ಷಣ ಎದೆ ಝಲ್‌ ಎಂದಿತು. ತಾನೇ ಕೋಮಲ ಳಾಗಿ ತತ್ತರಿಸಿದಳು. ಅಲ್ಲಿ ಇರಲಾಗಲಿಲ್ಲ. “ನಿಲ್ಲೇ ನಿಲ್ಲೇ’ ಎಂಬ ಗೆಳತಿಯರ ಮಾತು ಕಿವಿಗೆ ಹಾಕಿ ಕೊಳ್ಳದೆ ಓಡಿಬಿಟ್ಟಳು. ಸ್ಕೂಟಿ ಬರ್ರ ಎಂದ ಶಬ್ದ.

ಮನೆಯಲ್ಲಿ ಅಪ್ಪ ಅಮ್ಮ ಇರಲಿಲ್ಲ. ಒಳಗೆ ರೂಮಲ್ಲಿ ಹೋಗಿ ಬಿದ್ದುಕೊಂಡಳು. ದುಃಖ ಒತ್ತರಿಸಿ ಬಂತು “ಕೋಮಲಾ ಕೋಮಲಾ’ ಎಂದು ಪರಿತಪಿಸಿದಳು. ಕೋಮಲಾ ಬಂದು ನಿಂತಂತೆ ಆಯಿತು. ಹಾಗೇ ನೋಡುತ್ತಾ ಇದ್ದಂತೆ ಕೋಮಲಾ ಅಲ್ಲ ತಾನೇ ಅಲ್ಲಿ. ವೆೆುçಯಲ್ಲಿ ಶಾಕ್‌ ಹೊಡೆದಂತೆ ಬೆಚ್ಚಿದಳು. ಅಂದರೆ ತನಗೇ ಹಾಗಾದರೆ? ಎಂದೆಂದೂ ಬಾರದ ಯೋಚನೆ. ಮೈಯೆಲ್ಲ ನಡುಕ. ಎಲ್ಲ ಕಳೆದುಕೊಂಡ ಅಪ್ಪ ಅಮ್ಮ ಮಗಳೇ ಎನ್ನುತ್ತಾ ನಿಂತಿದ್ದಾರೆ. ತನಗೆ ಏಳಲಾಗುತ್ತಿಲ್ಲ. ದೇಹವೆಲ್ಲ ಜಜ್ಜಿಹೋಗಿದೆ. ಅಪ್ಪ ಅಮ್ಮ ರೋದಿಸುತ್ತಿದ್ದಾರೆ. ಸಮಾಧಾನ ಪಡಿಸಬೇಕು. ತನಗೆ ದೇಹವೇ ಇಲ್ಲ. ಅಷ್ಟರಲ್ಲೇ ದೊಡ್ಡ ಗಾಡಿ ಬರುತ್ತಿದೆ. ಅಪ್ಪ ಅಮ್ಮನ ಮೇಲೆ ಬರುತ್ತಿದೆ. ಅಯ್ಯೋ ಚೀರಬೇಕು. ಒಂದೇ ಸಮನೆ ಹಾರ್ನ್.

ಒಂದೇ ಸಮನೆ ಸತತವಾಗಿ ಕಾಲಿಂಗ್‌ ಬೆಲ್‌. ಭೋರ್ಗರೆದಿತ್ತು. ಥಟ್ಟನೆ ಎದ್ದಳು. ಕಣ್ಣು ಬಿಟ್ಟಳು. ಅರೆ ಇದೆಲ್ಲಾ ಕನಸೇ? ಹೌದು ತನ್ನ ಮನೆಯಲ್ಲೇ ಇದ್ದೇನೆ. ಅಪ್ಪ ಅಮ್ಮಗೆ ಏನೂ ಆಗಿಲ್ಲ. ತಾನೂ ಇದ್ದೇನೆ.
ಆದರೆ ಕೋಮಲಾ… ಅದು ಕನಸಲ್ಲ.

ಎದ್ದು ಬಾಗಿಲು ತೆರೆದಾಗ ಅಪ್ಪ, ಅಮ್ಮ…

ಮಗಳನ್ನು ನೋಡಿ ರಾಧಮ್ಮ ಬೆಚ್ಚಿದರು. “”ಏನೇ ಮಾರಿ ನೋಡಿಕೋ ಕರಕಲು ದೋಸೆ ಆಗಿದೆ.” ತಂದೆಯೂ ಬಂದರು. ಏನೋ ಸಾಧಿಸಿದ ತೃಪ್ತಿ ಇತ್ತು.

“”ವಾರುಣಿ, ಒಳ್ಳೆಯ ಗಿರಾಕಿ ಸಿಕ್ಕಾನೆ. ಅರವತ್ತು ಲಕ್ಷಕ್ಕೆ ಅಗ್ರಿಮೆಂಟ್‌ ಆಯ್ತು. ಇಗೋ ಹತ್ತು ಲಕ್ಷ ಅಡ್ವಾನ್ಸ್‌ ಕೊಟ್ಟಾನೆ… ಉಳಿದದ್ದು ನಾಳೆ ಕೊಡುತ್ತಾನೆ.”

ಮಗಳು ಅಪ್ಪನನ್ನು ನೋಡಿದಳು ಮಾತು ಸಾಧ್ಯವಾಗಲಿಲ್ಲ. ಇದೇನು? ಮಗಳು ಕುಣಿದು ಕುಪ್ಪಳಿಸುತ್ತಾಳೆ ಎಂದಿದ್ದರೆ ಹೀಗೇಕೆ?

“”ಡೊನೇಷನ್‌ ಕೊಟ್ಟು ಸೇರಲ್ಲ” ಎಂದಳು ವಾರುಣಿ ಶಾಂತವಾಗಿ ದೃಢವಾಗಿ.
ಏನೂ ಅರ್ಥವಾಗದೆ ಅಪ್ಪ ಬೆಕ್ಕಸ ಬೆರಗಾಗಿದ್ದರು.

Leave a Reply

Your email address will not be published. Required fields are marked *

ನೀವು ನೋಡುತ್ತಿರುವುದು ಉಚಿತ ಪ್ರತಿ, ತರಂಗದ ಪೂರ್ಣಪ್ರತಿಯನ್ನು ಫ್ಲಿಪ್ ಬುಕ್ ರೂಪದಲ್ಲಿ ಪಡೆಯಲು ಚಂದಾದಾರರಾಗಿ.

Powered By Indic IME