ಪ್ರಿಯ ಓದುಗರೇ

ಬೆದರುಗೊಂಬೆಯ ಆತ್ಮಪ್ರಶಂಸೆ

ಸಂಧ್ಯಾ ಪೈ (ವ್ಯವಸ್ಥಾಪಕ ಸಂಪಾದಕರು) | April 8, 2014

Print Friendly

ಕವಿಯೊಬ್ಬನಿಗೆ ಒಂದು ಬೆದರುಬೊಂಬೆ ಕಂಡಿತು. ಜೋಳದ ಗದ್ದೆಯೊಂದರ ಮಧ್ಯೆ ಬಿದಿರಿನ ಗೂಟಕ್ಕೆ ಹುಲ್ಲು ಹೊದೆಸಿ ಮನುಷ್ಯಾಕಾರಕ್ಕೆ ತಂದು ಉದ್ದನೆ ಅಂಗಿಯೊಂದನ್ನು ತೊಡಿಸಲಾಗಿತ್ತು. ತಲೆಯಿರಬೇಕಾದ ಕಡೆ ಮಣ್ಣಿನ ಮಡಕೆಯೊಂದನ್ನು ಬೋರಲು ಹಾಕಿ, ಅದಕ್ಕೆ ಸೀಮೇ ಸುಣ್ಣದ ಕಣ್ಣು , ಮೂಗು, ಬಾಯಿ ಬಿಡಿಸಿದ್ದರು. ತಲೆಗೊಂದು ಬಣ್ಣದ ಬಟ್ಟೆಯ ಮುಂಡಾಸಿತ್ತು. ಬೆಳೆ ತುಂಬಿ ನಿಂತ ಹೊಲಗದ್ದೆಗಳಲ್ಲಿ, ಮೇಲೇರುತ್ತಿರುವ ಕಟ್ಟಡಗಳಿಗೆ ದೃಷ್ಟಿಯಾಗದಂತೆ ಹೀಗೆ ಬೆದರುಬೊಂಬೆ ಇಡುವುದು ಇಂದಿಗೂ ಪ್ರಚಲಿತದಲ್ಲಿದೆ.

ದೊಡ್ಡ ನಗರವಾಸಿಗಳು ಇಂಥದ್ದನ್ನು ನೋಡಿರುವುದು ಅಪರೂಪ. ಯಾಕೆ ಎಂದರೆ, ಶಹರದ ಬುದ್ಧಿವಂತರಿಗೆ “ಕಣ್ಣು’, “ದೃಷ್ಟಿ’ ಎಂಬುದೆಲ್ಲ ಮೂಢನಂಬಿಕೆ. ಅವರು ಹೊಲಗದ್ದೆ ನೋಡಿರುವುದು ಅಪರೂಪ. ಹೀಗೊಂದು ವಾಡಿಕೆ ನಮ್ಮ ಹಳ್ಳಿಗಳಲ್ಲಿ, ಗ್ರಾಮಾಂತರ ಬದುಕಿನಲ್ಲಿ ಇನ್ನೂ ಇದೆ ಎನ್ನಲು ಹೀಗೆ ಹೇಳಿದೆ ಅಷ್ಟೇ.

ಇರಲಿ, ಕವಿಗೆ ಈ ಬೆದರುಬೊಂಬೆ ನೋಡಿ ಕುತೂಹಲವಾಯಿತು. ಪಾಪ, ಹೇಗಿರಬಹುದು ಇದರ ಜೀವನ. ನಿಂತಲ್ಲಿಂದ ಅತ್ತಿತ್ತ ಅಲುಗಾಡುವಂತಿಲ್ಲ! ಮಳೆ, ಬಿಸಿಲು, ಗಾಳಿಗಳಿಗೆ ಮೈ ಸವೆದು ಹೋಗುತ್ತದೆ! ಇನ್ನು ದೂರದಿಂದ ಇದನ್ನು ನೋಡಿದವರು ಮನುಷ್ಯನೇ ಕಾವಲು ನಿಂತಿದ್ದಾನೆ ಎಂದು ಹೆದರಲೂಬಹುದಲ್ಲ! ಇದನ್ನೇ ಮಾತನಾಡಿಸಿ ನೋಡೋಣ ಎಂದು ಬೆದರುಬೊಂಬೆಯನ್ನು ಸಮೀಪಿಸಿದ.

“”ನಿನ್ನನ್ನು ನೋಡಿದರೆ ಕನಿಕರವಾಗುತ್ತದೆ. ಹಗಲೂರಾತ್ರಿ ಒಂದೇ ಕಡೆಯಲ್ಲಿ , ಒಂದೇ ಭಂಗಿಯಲ್ಲಿ ನಿಂತು ಸಾಕುಸಾಕಾಗಿರಬಹುದು ಅಲ್ಲವೇ? ಇನ್ನು ಮಂದಿ ನಿನ್ನನ್ನು ಕಂಡು ಹೆದರುವಾಗ ದುಃಖವಾಗುತ್ತಿರಲೂಬಹುದು. ಪ್ರೀತಿ ಸಿಕ್ಕಿದಾಗ ಸಿಗುವ ಆನಂದವೇ ಬೇರೆ. ಹೆದರಿಕೆ, ಭಯಗಳಿಂದ ಉಂಟಾಗುವ ತಿರಸ್ಕಾರಕ್ಕಿಂತ ಹೆಚ್ಚಿನ ದುಃಖ ಬೇರೆ ಯಾವುದೂ ಇರದು. ಪಾಪ ಪಾಪ!” ಎಂದ ಕವಿರಾಯ.

ಬೆದರುಬೊಂಬೆ ಪಕಪಕನೆ ನಕ್ಕಿತು. “”ಹಾಗೇನೂ ಇಲ್ಲ. ಹುಟ್ಟಿನಿಂದ ಹೀಗೇ ಇರುವುದರಿಂದ, ಇದಕ್ಕಿಂತ ಬೇರೆ ಜೀವನ ಹೇಗಿದೆ ಎಂದು ಗೊತ್ತೇ ಇಲ್ಲವಾದುದರಿಂದ ಬದುಕು ಸಹನೀಯವೇ ಆಗಿದೆ. ಆದರೆ ಮಂದಿ ನನ್ನನ್ನು ಕಂಡು ಹೆದರುವಾಗ ಮಾತ್ರ ಬಲು ಖುಶಿಯಾಗುತ್ತದೆ. ತೆನೆ ಕದಿಯಲು ಬರುವವರು ನನ್ನನ್ನು ಕಂಡು ಯಜಮಾನನೇ ಎಂದು ಓಡುವಾಗ ಬಿದ್ದು ಬಿದ್ದು ನಗುತ್ತೇನೆ. ದಾರಿಹೋಕರು ಅಮಾವಾಸ್ಯೆಯ ರಾತ್ರಿ, ಕತ್ತಲಲ್ಲಿ ನನ್ನನ್ನು ಭೂತ, ಪ್ರೇತವೆಂದು ಭಾವಿಸಿ ಕಿರುಚಿ ಕಪ್ಪುಗಟ್ಟುವುದನ್ನು ನೋಡುವಾಗ, ಓಹೋ ನನ್ನ ಶಕ್ತಿಯ ಬಗ್ಗೆ ಹೆಮ್ಮೆ ಎನಿಸುತ್ತದೆ. ಹೀಗೆ ನಾನಾ ರೀತಿಯ ಮನುಷ್ಯರು, ಪ್ರಾಣಿಗಳು ನನ್ನನ್ನು ಕಂಡು ಹೆದರಿ ಸಾಯುವುದನ್ನು ನೋಡುವ ಸಂಭ್ರಮದಲ್ಲಿ ನನ್ನ ಅಚರ ಬದುಕು ಅತ್ಯಂತ ಸಹನೀಯ.

“”ಇರಲಿ, ನೀನೂ ನನ್ನ ಹಾಗೆಯೇ ತಾನೆ ನಿನಗೂ ಜನರನ್ನು ಹೆದರಿಸುವಾಗ ಅಥವಾ ಜೀವ ಸಂಕುಲ ನಿಮ್ಮನ್ನು ನೋಡಿ ಭಯ ಪಡುವಾಗ ಒಂದು ರೀತಿಯ ವಿಚಿತ್ರ ಸಂತೋಷವಾಗುವುದನ್ನು ನಾನು ಗಮನಿಸಿದ್ದೇನೆ. ಉದಾಹರಣೆಗೆ ಗಂಡ, ಹೆಂಡತಿಯನ್ನು ಸಾಮ, ದಾನ, ಭೇದ, ದಂಡಗಳಿಂದ ಹದ್ದುಬಸ್ತಿನಲ್ಲಿಟ್ಟಿದ್ದೇನೆ ಎಂದು ಬೀಗುವುದನ್ನು ನೋಡಿದ್ದೇನೆ. ರಾಜಕಾರಣಿಗಳು ಅಧಿಕಾರ ಬಲದಿಂದ ತಮಗೆ ಬೇಕಾದುದನ್ನು ಪಡೆಯುತ್ತಾ ತಮ್ಮ ಅಧಿಕಾರದ ಭಯ ಪ್ರದರ್ಶಿಸುವುದನ್ನು, ಢೋಂಗಿ ಸನ್ಯಾಸಿಗಳು, ಮಠಾಧಿಪತಿಗಳು, ಅರ್ಚಕರು, ದೇಗುಲಗಳ ವ್ಯಾಪಾರ ಮಾಡುವವರು, ದೇವರ, ನರಕ ಯಾತನೆಗಳ, ಪುನರ್ಜನ್ಮಗಳ ಭಯ ಹುಟ್ಟಿಸಿ ಪಾಪದ ಮಂದಿಯನ್ನು ಅಳುವುದನ್ನು, ಹದಿಹರೆಯದ ಮಕ್ಕಳು ಹೆತ್ತವರನ್ನು ಬಿಟ್ಟು ಹೋಗುವ, ಆತ್ಮಹತ್ಯೆಯ ಬೆದರಿಕೆಯೊಡ್ಡಿ ತಮ್ಮ ಕೆಲಸ ಸಾಧಿಸುವುದನ್ನು ನಾನು ಗಮನಿಸಿದ್ದೇನೆ. ಇನ್ನು ಪ್ರಾಣಿಗಳೊಂದಿಗೆ ಅವನ ನಡವಳಿಕೆಯೇ! ಬಾಯಿಂದ ಹೇಳಿದರೆ ನನಗೆ ಪಾಪ ತಟ್ಟಬಹುದು. ತನ್ನ ಸ್ವಾರ್ಥಕ್ಕಾಗಿ ಅವುಗಳಿಗೆ ಉಪವಾಸ ಹಾಕುವ, ಸೆರೆಯ ಹೊಡೆತಬಡಿತಗಳ ಹೆದರಿಕೆ ತೋರಿಸಿ ತನ್ನ ಕೆಲಸ ಮಾಡಿಸಿಕೊಳ್ಳುತ್ತಾನಲ್ಲ! ತನ್ನ ಪೈಶಾಚಿಕ ಸಂತೋಷಕ್ಕಾಗಿ ಹಕ್ಕಿಪಕ್ಕಿಗಳನ್ನು, ಜಲಚರಗಳನ್ನು ಸೆರೆ ಹಾಕಿ ಅವುಗಳ ಮೇಲೆ ನಾನಾ ರೀತಿಯ ಪ್ರಯೋಗಗಳನ್ನು ನಡೆಸುತ್ತಾನಲ್ಲ! ಇವೆಲ್ಲವೂ ಹೆದರಿಸುವ ಪರಾಕಾಷ್ಠತೆಯ ಕೆಲವು ಮಾದರಿಗಳು ಮಾತ್ರ. ನಿನ್ನ ಉತ್ತರವೇನು ಮನುಷ್ಯ?” ಎಂದು ಕೇಳಿತು ಬೆದರುಬೊಂಬೆ.

ಒಂದೆರಡು ಕ್ಷಣ ಯೋಚಿಸಿದ ಅನಂತರ ಮನುಷ್ಯ “”ಹೌದು, ನೀನು ಹೇಳಿದ್ದೆಲ್ಲವೂ ಸತ್ಯ. ಇವುಗಳಿಂದ ನಮಗೆ ಒಂದು ವಿಚಿತ್ರ ರೀತಿಯ ಸಂತೋಷ ಸಿಗುತ್ತದೆ” ಎಂದು ಒಪ್ಪಿಕೊಂಡ.

ಕೂಡಲೇ ಆ ಬೆದರುಬೊಂಬೆ ಕುಣಿಯತೊಡಗಿತು! “”ಇಂಥ ಮನುಷ್ಯರು ಮೂಳೆ, ಮಾಂಸ, ರಕ್ತದಿಂದಾದವರಲ್ಲ. ಇವರಲ್ಲಿ ಮಿಡಿವ ಬಡಿವ ಹೃದಯವಿಲ್ಲವೇ ಇಲ್ಲ! ಇವರು ನನ್ನಂತೇ ಹುಲ್ಲಿನ ಮನುಷ್ಯರು. ಖಾಲಿ ಖಾಲಿ ಗಡಿಗೆ ತಲೆಯವರು! ಚಲರಲ್ಲ ಅಚಲರು! ಎಂದೂ ಮುಂದೆ ಹೋಗಲಾರದವರು, ಸ್ಥಾಯಿಗಳು. ಮಾತ್ರವಲ್ಲ , ಇವರೂ ಬೆದರುಗೊಂಬೆಗಳು! ” ಎನ್ನುತ್ತಾ ಕುಣಿಯತೊಡಗಿತು.

ಸುಖಕ್ಕಾಗಿ ಮನುಷ್ಯ ಏನೇನು ಮಾಡುತ್ತಾನೆ? ತಿಮ್ಮ ಗುರು ಹೇಳುತ್ತಾರೆ -
ಏನೇನು ಹಾರಾಟ ಸುಖಕೆಂದು ಲೋಕದಲಿ|
ತಾನಾಗಿ ಗಾಳಿವೊಲ್‌ ಬಂದ ಸುಖವೆ ಸುಖ||
ನೀನೆ ಕೈ ಬೀಸಿಕೊಳೆ, ನೋವು, ಬೆವರುಗಳೆ ಫ‌ಲ|
ಮಾಣು ಮನದುಬ್ಬಸವ – ಮಂಕುತಿಮ್ಮ (827)

ಮನುಷ್ಯನೇ ಮನದ ಉಬ್ಬಸವ (ಧಾವಂತವನ್ನು) ನಿಲ್ಲಿಸು. ತಾನಾಗಿ ಬೀಸಿ ಬಂದ ತಂಬೆಲರೇ ಸುಖ.
ಕೃತಕ ರೀತಿಯಿಂದ ನಡೆಸುವ ಹಾರಾಟಗಳಿಂದ ಮೈ ನೋವೇ ಹೊರತು ,ಬೇರೆ ಏನೂ ಫ‌ಲವಿಲ್ಲ ಎನ್ನುತ್ತಾರೆ ತಿಮ್ಮಗುರು.

Leave a Reply

Your email address will not be published. Required fields are marked *

ನೀವು ನೋಡುತ್ತಿರುವುದು ಉಚಿತ ಪ್ರತಿ, ತರಂಗದ ಪೂರ್ಣಪ್ರತಿಯನ್ನು ಫ್ಲಿಪ್ ಬುಕ್ ರೂಪದಲ್ಲಿ ಪಡೆಯಲು ಚಂದಾದಾರರಾಗಿ.

Powered By Indic IME