ಸಾಂತ್ವನ ?

ನೊಂದ ಜೀವಕ್ಕೆಹನಿಹನಿ ಸಂತೈಕೆ

ಇರುವ ಸುಖದ ಕಡೆಗೆ ಗಮನ ಕೊಡಿ!

ಡಾ|| ಸಂಧ್ಯಾ ಪೈ | June 4, 2014

Print Friendly

ಸರಕಾರಿ ನೌಕರಿ ಇದೆ. ವಯಸ್ಸು 43. ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವ ಪತಿ, ಮದುವೆ ವಯಸ್ಸಿಗೆ ಬಂದಿರುವ ಸುಂದರ ಮಗಳು, ಸಂಪನ್ನನಾದ ಮಗ ಇರುವ ಸುಂದರ ಸಂಸಾರ ನನ್ನದು. ಹಿಂದೆ ಒಬ್ಬನನ್ನು ಪ್ರೀತಿಸಿ, ಏನೇನೋ ಕನಸು ಕಂಡಿದ್ದೆ. ಅನ್ಯ ಧರ್ಮದವರಾದ ನಾವು ಒಬ್ಬರಿಗೊಬ್ಬರು ಹೇಳದೆ ಬೇರೆಯಾದೆವು. ಆದರೆ ಈಗ ಎರಡು ವರ್ಷಗಳ ಹಿಂದೆ ಆಕಸ್ಮಿಕವಾಗಿ ಮತ್ತೆ ಅವನು ಭೇಟಿಯಾದ. ಅಂದಿನಿಂದ ನಾನು ಮಾನಸಿಕವಾಗಿ ಬಹಳ ನೋವು ಅನುಭವಿಸುತ್ತಿದ್ದೇನೆ. ನಾವಿಬ್ಬರು ಅಂದು, ಇಂದು ಯಾವ ತಪ್ಪನ್ನೂ ಮಾಡಿಲ್ಲ. ಆದರೆ ಈಗ ನನ್ನ ಮನಃಸ್ಥಿತಿ ಬದಲಾಗಿ ನನಗೆ ಜೀವನವೇ ಬೇಡವಾಗಿದೆ. ಅವನನ್ನು ಮರೆಯೋಕೆ ಆಗ್ತಾ ಇಲ್ಲ. ನೀವು ನೀಡುವ ಸಲಹೆಯನ್ನು ನಾನು ನಗುನಗುತ್ತಾ ಸ್ವೀಕರಿಸುವೆ.
-ಹೆಸರು, ಊರು ಬೇಡ.

- ತಂಗೀ, ಕೈಗೆ ಎಟುಕದ ದ್ರಾಕ್ಷಿ ಸಿಹಿ (ಹುಳಿಯಲ್ಲ). 43ರಲ್ಲಿ ನೀವು ಈ ಭ್ರಮೆಗೆ ಸಿಲುಕಿರುವಿರಿ. ಪ್ರೀತಿ ಎಂದರೇನು? ಯೋಚಿಸಿ. ಪರಸ್ಪರ ಗೌರವವೇ? ದೈಹಿಕ ಆಕರ್ಷಣೆಯೆ? ಸಂತಾನೋತ್ಪತ್ತಿಗೆ ಪ್ರಕೃತಿ ಹರಡಿರುವ ಮಾಯಾಜಾಲವೇ? ಇಂದಿನ ಕಥೆ, ಸಿನೆಮಾ, ಸೀರಿಯಲ್‌ಗ‌ಳ ಪ್ರಭಾವವೇ? ಏನು? ಮೊದಲು ಗುರುತಿಸಿ.
“ಪ್ರೇಮ’ ಒಂದು ಸಂಕೀರ್ಣ, ನಿಗೂಢ! ಇದನ್ನು ಹೀಗೆ ಎಂದು ವಿವರಿಸಿದವರಿಲ್ಲ. ನೀವು ಹಿಂದೆ ಮಾಗದ ಮನಸ್ಸಿರುವಾಗ “ಪ್ರೀತಿಸಿದಿರಿ’. ಮತ್ತೆ ಭೇಟಿಯಾದಾಗ ಹಳೆಯ ಭಾವನೆಗಳು ಮೇಲೆದ್ದು ಬಂದವು. ಒಂದು ಬಾರಿ ಆ ಪ್ರೀತಿಸಿದವರೊಂದಿಗೆ ಜೀವನ ನಡೆಸಿದ್ದರೆ, ಪ್ರೀತಿ ಉಳಿಯುತ್ತಿತ್ತೋ ಇಲ್ಲವೋ ಎಂಬುದು ಸಂದೇಹಾಸ್ಪದ.

ದೇವರು ನಿಮಗೆ ಸಮಸ್ತ ಸುಖ ನೀಡಿದ್ದಾನೆ. ಪ್ರೀತಿಸುವ ಪತಿ, ಸುಂದರ-ಸುಶೀಲ ಮಕ್ಕಳು, ನೌಕರಿ, ಸುಖೀ ಜೀವನ ಭಗವಂತನ ದೇಣಿಗೆ. ಅವರಿಗೆ ದ್ರೋಹ ಮಾಡಿ ಮತ್ತೆ ಭ್ರಮಾಜಾಲಕ್ಕೆ ಸಿಲುಕುವುದು ಮೂರ್ಖತನ.
ಮದುವೆಯಾಗುವಾಗ ಧರ್ಮ ಅರ್ಥ ಕಾಮಗಳಲ್ಲಿ ಒಂದಾಗಿ ನಡೆಯುತ್ತೇನೆ ಎಂದು ಪರಸ್ಪರ ಮಾತು ಕೊಡುತ್ತೇವೆ. ನಿಮಗೆ ಮಕ್ಕಳ ಜವಾಬ್ದಾರಿಯೂ ಇದೆ. ತಾಯಿಯ ಮೂರ್ಖತನದಿಂದ ಅವರು ತಲೆತಗ್ಗಿಸುಂತಾಗಬಾರದಲ್ಲ? ಪತಿಯ ಬಗ್ಗೆ ನಿಮಗೆ ಅಪಾರ ಗೌರವ ಇದೆ. ಸಂತೃಪ್ತ ಜೀವನದ ಬುನಾದಿಯೇ ಇದು. ಇದೇ ಪ್ರೀತಿ. ಹುಚ್ಚುತನ ಬಿಟ್ಟು ವೈವಾಹಿಕ ಜೀವನದ ಗೌರವ ಉಳಿಸಿಕೊಂಡು, ಸುಖವಾಗಿರಿ.

ಮಹಿಳೆ, 36 ವರ್ಷ, ಕಳೆದ 13 ವರ್ಷಗಳಿಂದ ಸ್ವಲ್ಪ ಬುದ್ಧಿಮಾಂದ್ಯತೆಗೆ ಹಾಗೂ ನಡವಳಿಕೆಯ ತಿಳುವಳಿಕೆಗೆ ಅಲೋಪಥಿ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದೇನೆ. ಅದರಿಂದ ನನಗೆ ಸ್ವಲ್ಪ ಮಾತ್ರ ಉಪಯೋಗವಾಗಿದೆ. ವೈದ್ಯರು ಹೇಳಿದ ಮಾರ್ಗ ಅನುಸರಿಸಿದರೂ ಏನೂ ಪ್ರಯೋಜನವಿಲ್ಲ. ಈಗ ನಡೆಯುವುದನ್ನು ಮರೆಯುತ್ತೇನೆ.

ಬೇರೆ ಯಾವುದಾದರೂ ರೀತಿಯಿಂದ ನನ್ನ ಬುದ್ಧಿಮಾಂದ್ಯತೆ ಹಾಗೂ ನಡವಳಿಕೆಯ ದೋಷವನ್ನು ಸರಿಪಡಿಸಬಹುದೇ ತಿಳಿಸಿ? ಎಲ್ಲಿ, ಯಾರು ನನಗೆ ಮೋಸ ಮಾಡುತ್ತಾರೆಂದು ಭಯ. ಏನು ಮಾಡಬೇಕೆಂದೇ ತೋಚುತ್ತಿಲ್ಲ.

-ನೊಂದ ಸ್ನೇಹಿತೆ.

-
ತಂಗೀ, ಬುದ್ಧಿವಂತೆಯಂತೆ ಕಾಣುತ್ತೀರಿ. ಚೆಂದ ಬರೆದಿರುವಿ. ವೈದ್ಯರನ್ನು ಬದಲಾಯಿಸಿ ನೋಡಿ. ಕೆಲವೊಮ್ಮೆ ಸಮಸ್ಯೆ ಗುರುತಿಸುವಲ್ಲಿ ಯಾ ಔಷಧಿ ನೀಡುವಾಗ ಹೊಂದಾಣಿಕೆ ಇಲ್ಲದೆ ಗೊಂದಲವಾಗುತ್ತದೆ. ಬಲ್ಲವರಿಂದ ಯೋಗಾಸನ, ಪ್ರಾಣಾಯಾಮ, ಧ್ಯಾನ ಕಲಿಯಿರಿ. ಸಮಸ್ಯೆ ಪರಿಹಾರವಾಗುತ್ತದೆ. ದೇವರು ಒಳ್ಳೆಯದು ಮಾಡಲಿ.

ಹಳ್ಳಿ ಊರಲ್ಲಿ ಪುಟ್ಟದೊಂದು ಟೀ ಶಾಪ್‌ ಇಟ್ಟು 100-200 ವ್ಯಾಪಾರದಿಂದ ಮಕ್ಕಳ ಓದು, ಮದುವೆ ಮುಗಿಸಿ ವಯಸ್ಸಾದ ಕಾಲಕ್ಕೆ ಮಗನ ಮನೆಗೆ ಗಂಡ-ಹೆಂಡತಿ ಬಂದೆವು. ಗಂಡ ಆರು ವರ್ಷದ ಹಿಂದೆ ಕಾಯಿಲೆಯಿಂದ ತೀರಿಕೊಂಡರು. ನಾವು ಉಳಿಸಿದ ಹಣ ಏನೂ ಇಲ್ಲ. ಸಣ್ಣ ಜಾಗ ಮಾರಿದ ಹಣ ಸ್ವಲ್ಪ ಬ್ಯಾಂಕಲ್ಲಿ ಇದೆ. ಎರಡು ಸಾವಿರ ಬಡ್ಡಿ ಬಂದರೆ ನನ್ನ ಔಷಧಿಗೆ ಸಾಲುವುದಿಲ್ಲ. ಮೂಳೆ ಸವೆತದ ರೋಗ ಇದೆ. ದಿನಾ ನೋವಿನ ಮಾತ್ರೆ ನುಂಗದಿದ್ದರೆ ಎದ್ದೇಳಲು ಕಷ್ಟ. ಮಗನ ನಡತೆ ಚೆನ್ನಾಗಿಲ್ಲ. ಕೆಲಸಕ್ಕೆ ಹೋದಾಗ ಮನೆ ಖರ್ಚಿಗೆ ಸ್ವಲ್ಪ ಹಣ ಕೊಡುತ್ತಾನೆ. ಇಲ್ಲವಾದರೆ ನಾನೇ ಖರ್ಚು ಮಾಡಿ ಮನೆ ನಡೆಸುತ್ತಿದ್ದೆ. ಈಗ ಮನೆ ಕೆಲಸ ಮಾಡುವ ಶಕ್ತಿ ಇಲ್ಲ. ಇಬ್ಬರು ಮೊಮ್ಮಕ್ಕಳನ್ನು ನೋಡಿಕೊಳ್ಳಬೇಕು. ಅವರು ಕೇಳಿದ್ದು ಕೊಡುವಷ್ಟು ದುಡ್ಡು ಇಲ್ಲ. ಸೊಸೆ ಕೆಲಸಕ್ಕೆ ಹೋಗುತ್ತಾಳೆ. ಅವಳಿಗೆ ಮನೆ ಕೆಲಸ ಮಾಡಲೂ ಬಾರದು. ದುಡ್ಡು ಖರ್ಚು ಮಾಡಲೂ ಬಾರದು. ಹಾಗಿದ್ದರೆ ಅವಳು ಖುಶಿಯಲ್ಲಿ ಇರುತ್ತಾಳೆ. ಈ 70ರ ವಯಸ್ಸಿನಲ್ಲಿ ಬೇರೆ ಮನೆ ಮಾಡುವಷ್ಟು ಹುಮ್ಮಸ್ಸು ಇಲ್ಲ, ಅನುಕೂಲವೂ ಇಲ್ಲ. ಆಶ್ರಮ ಸೇರುವ ಎಂದರೆ ಧೈರ್ಯವಿಲ್ಲ. ಎರಡು ತಿಂಗಳ ಹಿಂದೆ ಅಪ್ಪನ ಆಸ್ತಿಯ ಸಂಬಂಧ, ಅಪ್ಪ ಸತ್ತು 15 ದಿನಕ್ಕೆ ಒಂದು ನಿಮಿಷ ಆಲೋಚನೆ ಮಾಡುವಷ್ಟು ಸಮಯ ಕೊಡದೆ ಮನೆಗೆ ಕರೆಸಿ ಸಹಿ ಮಾಡಿಕೊಂಡರು. ನನಗೆ ಆಸ್ತಿಯಲ್ಲಿ ಹಕ್ಕಿಲ್ಲವಂತೆ. ಹಕ್ಕಿಲ್ಲವಾದರೆ ನನ್ನ ಸಹಿ ಯಾಕೆ ಬೇಕು? ನನ್ನ ಹತ್ತಿರ ಎಲ್ಲಾ ಪೇಪರ್‌ ಕೊಟ್ಟು ನೀನೇ ಎಲ್ಲಾ ಹಂಚಿಕೊಡು ಎಂದರೆ ನನಗೇನೂ ಬೇಜಾರಿಲ್ಲದೆ ಕೊಟ್ಟುಬಿಡುತ್ತಿದ್ದೆ. ಆದರೆ ಹಾಗೆ ಆಗಲಿಲ್ಲ. ಇದ್ದರೆ ಮಗನ ಮನೆಯಲ್ಲಿ ಇರಬೇಕು, ಇಲ್ಲ ಜೀವವನ್ನೇ ಕಳೆದುಕೊಳ್ಳಬೇಕು ಅನ್ನಿಸುತ್ತಿದೆ. ಏನು ಮಾಡಲಿ ಹೇಳಿ.

-ಹೆಸರು, ಊರು ಬೇಡ.

- ತಾಯೀ, ವೃದ್ಧರು, ಅಸಹಾಯಕರಿಗೆ ನೆರವಾಗುವ ಅನೇಕ ಆಶ್ರಮಗಳಿವೆ. ವಿಚಾರಿಸಿ ನೋಡಿ. ಈ ವಯಸ್ಸಿನಲ್ಲಿ ಯಾವುದೇ ಏರುಪೇರುಗಳಿಲ್ಲದ, ಶಾಂತ ಜೀವನದ ಅಗತ್ಯ ನಿಮಗಿದೆ. ಮಕ್ಕಳ ಅನಾದರ ಮನೆಮನೆಯ ಕಥೆ. ಆದುದರಿಂದ ಅವರ ಬದುಕು ಅವರಿಗಿರಲಿ. ನೀವು ಹೊಸ ಜೀವನ ಕಟ್ಟಲು ಪ್ರಯತ್ನಿಸಿ. ಆರೋಗ್ಯವಂತರಾಗಿರುವಿರಿ. ಬಂಧು-ಬಳಗ ಹೇಗೇ ಇರಲಿ. ಅವರಿಂದ ಸಹಾಯ ಬಯಸಲಾಗದು. ಪ್ರತಿಯೊಬ್ಬರಿಗೂ ಅವರದ್ದೇ ಸಮಸ್ಯೆ, ಜೀವನ ಇದೆ. ಆದಷ್ಟು ಸ್ವತಂತ್ರವಾಗಿ ಬದುಕಲು ಬಯಸುವುದೇ ಸರಿ. ಪ್ರಯತ್ನಿಸಿ. ಶಾಂತ ಜೀವನ ನಿಮ್ಮದಾಗಲಿ.

ನಿಮ್ಮಲ್ಲೂ ಇಂಥ ಪ್ರಶ್ನೆಗಳಿವೆಯೇ?
“ತರಂಗ’ದೊಂದಿಗೆ ಹಂಚಿಕೊಳ್ಳಿ.

ನಮ್ಮ ವಿಳಾಸ:
ಸಂಪಾದಕರು, ಸಾಂತ್ವನ ವಿಭಾಗ,
“ತರಂಗ’ ವಾರ ಪತ್ರಿಕೆ, ಉದಯವಾಣಿ ಕಟ್ಟಡ,
ಮಣಿಪಾಲ – 576 104
E-mail :taranga@manipalpress.com

Leave a Reply

Your email address will not be published. Required fields are marked *

ನೀವು ನೋಡುತ್ತಿರುವುದು ಉಚಿತ ಪ್ರತಿ, ತರಂಗದ ಪೂರ್ಣಪ್ರತಿಯನ್ನು ಫ್ಲಿಪ್ ಬುಕ್ ರೂಪದಲ್ಲಿ ಪಡೆಯಲು ಚಂದಾದಾರರಾಗಿ.

Powered By Indic IME