ಪ್ರಿಯ ಓದುಗರೇ...

ದೇವರು ಎಲ್ಲಿದ್ದಾನೆ?

ಸಂಧ್ಯಾ ಪೈ (ವ್ಯವಸ್ಥಾಪಕ ಸಂಪಾದಕರು) | April 20, 2014

Print Friendly

Taranga-SPai--Thಮಹಾಜ್ಞಾನಿ ಎಂದು ಹೆಸರುವಾಸಿಯಾಗಿದ್ದ ಸಂತರಲ್ಲಿ ನಾಲ್ಕು ಮಂದಿ ಎಳೆಯ ಸಾಧಕರು ಬಂದರು. ಕೊಂಚ ಗೊಂದಲದಲ್ಲಿದ್ದಂತೆ ಕಾಣುತ್ತಿದ್ದರು. “”ಸ್ವಾಮೀ, ನಮಗೆ ದೇವರನ್ನು ನೋಡಬೇಕು. ಎಲ್ಲಿದ್ದಾನೆ ಅವನು?” ಎಂದನೊಬ್ಬ . ಮತ್ತೂಬ್ಬ , “”ಬಹಳ ಜನರನ್ನು ಕಂಡೆವು, ತೀರ್ಥಯಾತ್ರೆಗಳಾದವು, ಪವಿತ್ರ ತೀರ್ಥಗಳಲ್ಲಿ ಮಿಂದಾಯಿತು. ಶಕ್ತಿಸಂಚಯ ಇದೆ ಎಂದ ದೇವಸ್ಥಾನಗಳಾದವು. ಎಲ್ಲಿಯೂ ದೇವರು ಕಾಣಲಿಲ್ಲ . ನಿಮ್ಮ ಮಾರ್ಗದರ್ಶನಕ್ಕಾಗಿ ಬಂದಿದ್ದೇವೆ” ಎಂದ. ಸಂತರು ಒಂದು ನಿಮಿಷ ಯೋಚಿಸಿದರು. ತೆಳುವಾದ ಮಂದಹಾಸದಿಂದ “”ಮೊದಲು ನೀವು ನನ್ನದೊಂದು ಕೆಲಸ ಮಾಡಬೇಕು. ಅನಂತರ ದೇವರನ್ನು ತೋರಿಸುವ ಕೆಲಸ ಮಾಡೋಣ” ಎನ್ನುತ್ತಾ ನಾಲ್ಕೂ ಮಂದಿಯ ಕೈಗೆ ಒಂದೊಂದು ಪಾರಿವಾಳಗಳನ್ನಿತ್ತ . “”ಯಾರೂ ನೋಡದ ಕಡೆ ಈ ಪಾರಿವಾಳಗಳನ್ನು ಕೊಂದು, ಹೆಣ ಹಿಡಿದುಕೊಂಡು ಬನ್ನಿ” ಎಂದ.

ಸರಿ ಎಂದು ಒಪ್ಪಿದರು ನಾಲ್ಕೂ ಮಂದಿ. ಮೊದಲನೆಯವ ಹೊರಗೆ ಬಂದ. ಆಶ್ರಮದ ಹೊರಗು ನಿರ್ಜನವಾಗಿತ್ತು . ಮಧ್ಯಾಹ್ನದ ಬಿಸಿಲಿಗೆ ಮಂದಿ ಮನೆಯೊಳಗೆ ವಿಶ್ರಮಿಸುತ್ತಿದ್ದರು. ಅತ್ತಿತ್ತ ನೋಡಿದವನೇ ಪಾರಿವಾಳದ ಕತ್ತು ಮುರಿದ. ಸಂತನ ಮುಂದಿಟ್ಟು “”ಇಗೋ, ಕೆಲಸ ಮುಗಿಯಿತು. ಯಾರೂ ನೋಡಲಿಲ್ಲ” ಎಂದ.

ಎರಡನೆಯವ ಯೋಚಿಸಿದ, “”ರಸ್ತೆಯ ಮೇಲಂತೂ ಯಾರೂ ಇಲ್ಲ . ಆದರೆ ಅತ್ತಿತ್ತ ಮನೆಯ ಕಿಟಿಕಿಗಳಿಂದ ಯಾರಾದರೂ ಇಣುಕುತ್ತಿರಬಹುದು. ಪಕ್ಕನೆ ಮನೆಯಿಂದ ಹೊರಗೆ ಬರಬಹುದು” ಎಂದುಕೊಂಡು ನಿರ್ಜನವಾದ ಗಲ್ಲಿಯೊಂದಕ್ಕೆ ಹೋದ. ಕೇವಲ ಆವರಣದ ಗೋಡೆಗಳಿರುವಲ್ಲಿ, ಒಂದು ಮೂಲೆಯಲ್ಲಿ ನಿಂತು ಪಕ್ಷಿಯ ಗೋಣು ಮುರಿದು, ಆಶ್ರಮಕ್ಕೆ ಬಂದ.

ಮೂರನೆಯವ ಮತ್ತೂ ಒಂದು ಹೆಜ್ಜೆ ಮುಂದೆ ಹೋದ. “”ಹಗಲು ಎಂದರೆ ಬೆಳಕು. ಬೆಳಕಿನಲ್ಲಿ ದೂರದೂರದ ವಸ್ತುಗಳು ಕಾಣುತ್ತವೆ. ಕತ್ತಲಾದರೆ ಹಾಗಲ್ಲ, ಕೆಲವೊಮ್ಮೆ ಪಕ್ಕದ್ದೂ ಕಾಣುವುದಿಲ್ಲ . ಆದುದರಿಂದ ಕತ್ತಲಾಗುವವರೆಗೆ ಕಾಯುವುದೇ ಸರಿ” ಎಂದುಕೊಂಡು, ಪೂರ್ತಿ ಕತ್ತಲಾದ ಅನಂತರ, ಮನೆಯ ಕಿಟಿಕಿ, ಬಾಗಿಲುಗಳನ್ನು ಭದ್ರವಾಗಿ ಮುಚ್ಚಿ, ಅಗುಳಿ ಹಾಕಿ, ಕತ್ತಲಲ್ಲೆ ಪಾರಿವಾಳವನ್ನು ಕೊಂದು, ಸಂತರ ಮುಂದೆ ಹಾಕಿದ.

ಇಷ್ಟಾದರೂ ನಾಲ್ಕನೆಯವನ ಸುಳಿವೇ ಇರಲಿಲ್ಲ . ಒಂದು ದಿನವಾಯಿತು, ಒಂದು ವಾರವಾಯಿತು, ತಿಂಗಳು ಕಳೆಯಿತು. ಅವ ಮರಳಿ ಬರಲೇ ಇಲ್ಲ . ಎಲ್ಲರೂ ಚಿಂತಿತರಾದರು. ಸಂತರಿಗೂ ಒಂದಿಷ್ಟು ಕಾತರವೆನಿಸಿತು. ಮತ್ತೆ ಒಂದಿಷ್ಟು ದಿನ ಕಳೆದವು. ಸಂತರಿಗೂ ಹೆದರಿಕೆ ಎನಿಸಿತು. ಶಿಷ್ಯರನ್ನು ನಾಲ್ಕೂ ದಿಕ್ಕಿಗೆ ಕಳುಹಿಸಿ ಇವನನ್ನು ಹುಡುಕಿ ತರುವಂತೆ ತಾಕೀತು ಮಾಡಿದರು.

ಕೆಲವು ದಿನಗಳಲ್ಲಿ ಅವರು ಇವನನ್ನು ಹುಡುಕಿ ತೆಗೆದರು. ಅವನು ತೀರಾ ಬದಲಾಗಿದ್ದ . ದೇಹ ಕೃಶವಾಗಿತ್ತು. ತಲೆ ಜಡೆಗಟ್ಟಿತ್ತು . ಮೈಮೇಲಿನ ಬಟ್ಟೆಬರೆಯ ಬಗ್ಗೆ ಗಮನವಿರಲಿಲ್ಲ . ಗಡ್ಡ-ಮೀಸೆಗಳು ಹುಲುಸಾಗಿ ಬೆಳೆದಿದ್ದವು. ಅವನ ಕಣ್ಣುಗಳಲ್ಲಿ ಒಂದು ವಿಲಕ್ಷಣ ತೇಜಸ್ಸಿತ್ತು . ಏನನ್ನೋ ಬಡಬಡಿಸುತ್ತಿದ್ದ .

ಗುರುಗಳು ಕೇಳಿದರು, “”ಪಾರಿವಾಳವನ್ನು ಏನು ಮಾಡಿದೆ? ಎಲ್ಲಿದೆ ಅದು?” ಅದು ಅವನಲ್ಲಿಯೇ ಇತ್ತು. ತನ್ನ ಅಂಗವಸ್ತ್ರದಲ್ಲಿ ಅದನ್ನು ಸುತ್ತಿಟ್ಟಿದ್ದ . “”ಅಯ್ಯ, ತಿಂಗಳಿಗಿಂತ ಹೆಚ್ಚಾಗಿದೆ. ಇನ್ನೂ ಇದನ್ನು ಅವುಚಿಕೊಂಡು ತಿರುಗುತ್ತಿರುವೆಯಲ್ಲಾ?” ಎಂದರು ಗುರುಗಳು. ನಾಲ್ಕನೆಯವನ ಮುಖದಲ್ಲಿ ಸಿಟ್ಟು ಕಂಡಿತು.

“”ಗುರುಗಳೇ, ಬಹಳ ಕಷ್ಟಕ್ಕೆ ಸಿಲುಕಿಸಿದಿರಿ ನನ್ನನ್ನು. ಮೊದಲನೆಯದಾಗಿ ಇದನ್ನು ಒಂದು ಕಾಡಿಗೆ ತೆಗೆದುಕೊಂಡು ಹೋದೆ. ಪಕ್ಷಿ-ಪ್ರಾಣಿಗಳು ಇಲ್ಲದ ಜಾಗ ಹುಡುಕಿ ಇದರ ಕತ್ತಿನ ಮೇಲೆ ಕೈಯಿಟ್ಟೆ . ನೋಡಿದರೆ ಮರ-ಗಿಡಗಳು, ಬಂಡೆಗಳು, ಆಕಾಶ ನನ್ನನ್ನು ದಿಟ್ಟಿಸಿ ನೋಡುತ್ತಿವೆ. ಕೂಡಲೆ ಗುಹೆಯೊಂದನ್ನು ಹೊಕ್ಕೆ. ಅಲ್ಲಿ ಕಲ್ಲುಗೋಡೆಗಳಿಗೆ ಕಣ್ಣಿತ್ತು. ಕೆಕ್ಕರಿಸಿ ನೋಡುತ್ತಿದ್ದವು. ಹೆದರಿ ಮನೆಗೆ ಹೋದೆ. ಕಿಟಿಕಿ, ಬಾಗಿಲುಗಳನ್ನು ಭದ್ರವಾಗಿ ಮುಚ್ಚಿ ಇದರ ಕತ್ತಿನ ಮೇಲೆ ಕೈ ಇಟ್ಟೆ. ಇದು ಕಿರುಚಲಿಲ್ಲ , ಕೂಗಲಿಲ್ಲ . ಆದರೆ ಅದಕ್ಕೆ ನನ್ನ ಮನಸ್ಸಿನಲ್ಲಿರುವುದು ತಿಳಿದಿತ್ತು ಎಂದು ಕಾಣುತ್ತದೆ. ಅದು ನಿರ್ಭಾವದಿಂದ ನನ್ನನ್ನೇ ದಿಟ್ಟಿಸಿ ನೋಡುತ್ತಿತ್ತು. ನನ್ನ ರೋಮಗಳು ಸೆಟೆದು ನಿಂತವು. ಒಂದು ಬಟ್ಟೆಯಿಂದ ಇದರ ತಲೆ ಮುಚ್ಚಿ, ಇದರ ಕಣ್ಣುಗಳನ್ನು ಮರೆಮಾಡಿದೆ. ಮತ್ತೆ ಇದರ ಕತ್ತು ಹಿಸುಕಹೋದೆ. ಥಟ್ಟನೆ ಅರಿವು ಬಂತು. ನಾನೇ ಅದನ್ನು ನೋಡುತ್ತಿದ್ದೆ. ಯಾರೂ ನೋಡದ ಕಡೆ ಎಂದಿದ್ದಿರಿ. ನಾನೂ ಒಂದು ಜೀವ ತಾನೇ? ನಾನು ಕಣ್ಣುಮುಚ್ಚಿಕೊಂಡೆ. ಸುತ್ತಮುತ್ತ ಏನಿದೆಯೋ ಅವುಗಳಿಗೆಲ್ಲ ದೃಷ್ಟಿ ಇತ್ತು. ಅವುಗಳು ನಾನು ಮಾಡುವುದನ್ನು ನೋಡುತ್ತಿದ್ದವು. ಅಯ್ಯೋ ದೇವರೇ, ಅಣುರೇಣು ತೃಣಕಾಷ್ಠಗಳಲ್ಲಿಯೂ ನೀನಿರುವಿ ಎನ್ನುತ್ತದೆ ನಮ್ಮ ಜ್ಞಾನ. ಹೀಗಿರುವಾಗ ಯಾರೂ ಕಾಣದಂಥ ಜಾಗವನ್ನು ಎಲ್ಲಿ ಹುಡುಕಲಿ? ಸಮಸ್ತ ಜಗತ್ತಿನಲ್ಲಿ ನಾನಾ ರೂಪಗಳಿಂದ ನೀನೇ ನೀನಾಗಿರುವಿಯಲ್ಲ! ಗುರುವೇ, ನನ್ನಿಂದ ಸಾಧ್ಯವೇ ಇಲ್ಲ. ಇಗೋ! ನಿಮ್ಮ ಪಾರಿವಾಳವನ್ನು ನಿಮಗೇ ಮರಳಿಸುತ್ತೇನೆ. ಅವನಿಲ್ಲದ ಜಗ ಹುಡುಕಲು ನನ್ನಿಂದ ಅಸಾಧ್ಯ” ಎಂದನವ.

ಗುರುಗಳು ಎದ್ದು ಬಂದು ಅವನನ್ನು ಅಪ್ಪಿಕೊಂಡರು. “”ಮಗುವೇ, ನೀನು ದ್ರಷ್ಟಾರ. ಕಂಡವ. ಅವನನ್ನು ಕಂಡೆ, ಅನುಭವಿಸಿದೆ. ನಿನ್ನ ಸಂಪರ್ಕದಿಂದ ನಾನೂ ಧನ್ಯನಾದೆ” ಎಂದ.

ಭಗವಂತ ಜಗತ್ತಿನ ಕಣಕಣಗಳಲ್ಲಿದ್ದಾನೆ ಎಂದರು ತಿಳಿದವರು. ಆದರೆ ಅವನನ್ನು ನೋಡಲಾಗದು ಎಂದರು. ಮನುಷ್ಯ ಇದಕ್ಕೊಂದು ಉದಾಹರಣೆ. ನಮ್ಮ ಹುಟ್ಟಿಗೆ ತಾಯಿ-ತಂದೆಯರ ವಂಶವಾಹಿಗಳು ಮೂಲ. ಇದರಲ್ಲಿ ಅವರು ಹೆತ್ತವರಿಂದ ಪಡೆದ ವಂಶವಾಹಿಗಳೂ ಸೇರಿರುತ್ತವೆ. ಆ ವಂಶದ ಹಿಂದಿನ ತಲೆಮಾರುಗಳನ್ನು ನಾವು ಕಂಡಿಲ್ಲ. ಆದರೆ ಕಾಣದಿದ್ದರೂ ನಮ್ಮ ಒಂದು ಭಾಗವಾಗಿ ಅವರಿದ್ದೇ ಇದ್ದಾರೆ. ಹಾಗೆ ಪಡೆದ ಈ ದೇಹ ನಡೆಸುವ ಚೈತನ್ಯ, ಒಂದು ಮೂಲದಿಂದ ಬಂದಿದೆ. ಮೂಲ ಯಾವುದು ಎಂಬುದು ನಮ್ಮ ಅರಿವಿಗಿನ್ನೂ ತಿಳಿದಿಲ್ಲ . ಹಾಗೆಂದು ಅದಿಲ್ಲ ಎಂದರೆ, ನಮ್ಮ ಇರುವಿಕೆಯೇ ಇಲ್ಲ ಎಂದಾಗುವುದು. ಅಲ್ಲವೇ? ಅದು ಯಾವುದು, ಎಲ್ಲಿದೆ, ಹೇಗಿದೆ ಎಂಬುದರ ಹುಡುಕಾಟವೇ ಬದುಕು. ಅದು ಶುರುವಾಗುವುದು ಅದು ಇದೆ ಎಂಬ ನಂಬಿಕೆಯಿಂದ!

Leave a Reply

Your email address will not be published. Required fields are marked *

ನೀವು ನೋಡುತ್ತಿರುವುದು ಉಚಿತ ಪ್ರತಿ, ತರಂಗದ ಪೂರ್ಣಪ್ರತಿಯನ್ನು ಫ್ಲಿಪ್ ಬುಕ್ ರೂಪದಲ್ಲಿ ಪಡೆಯಲು ಚಂದಾದಾರರಾಗಿ.

Powered By Indic IME