ತಾರಾ ತರಂಗ

ಗೋಪಿ | June 3, 2014

Print Friendly

ಕೋಮಲ್‌ ಕನಸು;ಚಿತ್ರದಲ್ಲಿ ನನಸು

tara-komalಕೋಮಲ್‌ ಅಭಿನಯದ ಇನ್ನೂ ಬಿಡುಗಡೆಯಾಗದ ಚಿತ್ರಗಳು ಡಬ್ಬದಲ್ಲಿ ಧೂಳು ಹಿಡಿಯುತ್ತಿರುವುದರಿಂದ ಕೋಮಲ್‌ ಈ ನಿರ್ಧಾರಕ್ಕೆ ಬಂದಿರಬೇಕು. ಕೋಮಲ್‌ಗೆ ಇತ್ತೀಚಿನ ದಿನಗಳಲ್ಲಿ ಹೆಚ್ಚೇನು ಹೊಸ ಅವಕಾಶಗಳು ಅರಸಿ ಬರದಿದ್ದರಿಂದ ಅವರು ನಿರ್ದೇಶಕರಾಗುವ ತೀರ್ಮಾನ ಕೈಗೊಂಡಿರಬೇಕು. ಇದುವರೆಗೂ ಅನೇಕ ಚಿತ್ರಗಳನ್ನು ಘೋಸ್ಟ್‌ ಡೈರೆಕ್ಟರ್‌ ಆಗಿ ನಿಯಂತ್ರಿಸುತ್ತಿದ್ದ ಕೋಮಲ್‌ಗೆ, ಈಗ ತಾನೇ ನಿರ್ದೇಶಕನಾದರೆ ಹೇಗೆ ಎಂದು ಅನಿಸಿರಬೇಕು.

ಇತ್ತೀಚೆಗೆ ಕೋಮಲ್‌ ನಿರ್ದೇಶಕರಾಗುತ್ತಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹಬ್ಬಿತ್ತು. ಎಲ್ಲಿಂದ ಈ ಸುದ್ದಿ ಹಬ್ಬಿತ್ತು ಎನ್ನುವುದಕ್ಕಿಂತ, ಎಲ್ಲರೂ ಕೋಮಲ್‌ ಯಾಕಾಗಿ ನಿರ್ದೇಶಕರಾಗುತ್ತಿರಬಹುದು ಎಂದು ತಂತಮ್ಮ ರೀತಿಯಲ್ಲೇ ವ್ಯಾಖ್ಯಾನಿಸತೊಡಗಿದರು. ಆಗ ಪ್ರಮುಖವಾಗಿ ಈ ಮೂರು ಕಾರಣಗಳು ದೊರೆತವು. ಹಳೆಯ ಚಿತ್ರಗಳಿಗೆ ಮುಕ್ತಿಯಿಲ್ಲ ಮತ್ತು ಹೊಸ ಚಿತ್ರಗಳು ಶುರುವಾಗುತ್ತಿಲ್ಲ ಎನ್ನುವ ಕಾರಣಕ್ಕೆ ಕೋಮಲ್‌ ನಿರ್ದೇಶಕರಾಗುತ್ತಿದ್ದಾರೆ ಎಂದು ಎಲ್ಲರೂ ತೀರ್ಮಾನಕ್ಕೆ ಬಂದರು.

ಆದರೆ, ಇನ್ನಷ್ಟು ತಲಾಶ್‌ ಮಾಡಿದಾಗ, ಬೇರೆ ಉತ್ತರ ಸಿಕ್ಕಿತ್ತು. ಕೋಮಲ್‌ ನಿರ್ದೇಶಕರಾಗುತ್ತಿರುವುದು ರಿಯಲ್‌ ಆಗಿಯಲ್ಲ. ರೀಲ್‌ ಆಗಿ. “ಸೂಪರ್‌ಸ್ಟಾರ್‌ ಆರ್‌ ಮತ್ತು ಡೈರೆಕ್ಟರ್‌ ಕೋಮಲ್‌’ ಎನ್ನುವ ಚಿತ್ರವೊಂದು ಮುಂದಿನ ತಿಂಗಳಿನಿಂದ ಶುರುವಾಗಲಿದೆ. ಹೆಸರಲ್ಲೇ ಡೈರೆಕ್ಟರ್‌ ಕೋಮಲ್‌ ಎಂದಿರುವುದರಿಂದ ಆ ಪಾತ್ರ ಯಾರು ಮಾಡುತ್ತಾರೆ? ಮತ್ತು ನಾಯಕ ಈ ಚಿತ್ರದಲ್ಲಿ ಏನಾಗಿರುತ್ತಾರೆ? ಎಂಬ ವಿವರಗಳೆಲ್ಲಾ ಅನಗತ್ಯ.

ಎಲ್ಲಾ ಕಲಾವಿದರಿಗೂ ತಾನು ಮುಂದೊಂದು ದಿನ ನಿರ್ದೇಶಕನಾಗಬೇಕು ಎಂಬ ಕನಸು ಇರುತ್ತದೆ. ಕೋಮಲ್‌ಗ‌ೂ ಇದ್ದಿರಬಹುದು. ಅದು ನಿಜಜೀವನದಲ್ಲಿ ಯಾವಾಗ ಸಾಕಾರಗೊಳ್ಳುತ್ತದೋ ಗೊತ್ತಿಲ್ಲ. ಆದರೆ, ಚಿತ್ರದಲ್ಲಿ ಸದ್ಯದಲ್ಲೇ ಕನಸು ನನಸಾಗಲಿದೆ.

“ಮನೆ ಕಟ್ಟೋಕೆ ಮಾತ್ರ ಗೊತ್ತು’

tara-jaggeshಜಗ್ಗೇಶ್‌ಗೆ ಸಿಟ್ಟು ಬಂದಿದೆ. ಅದು ವಿಶೇಷವೇನಲ್ಲ. ಆಗಾಗ ಅವರು ಸಿಟ್ಟು ಮಾಡಿಕೊಳ್ಳುತ್ತಿರಬೇಕು, ತಮಗೆ ಅನಿಸಿದ್ದನ್ನು ಹೇಳುತ್ತಿರಬೇಕು, ಅದರಲ್ಲಿ ಕೆಲವು ವಿವಾದಗಳಾಗಿ ಚರ್ಚೆಯಾಗಬೇಕು, ಕೆಲವು ದಿನಗಳ ಅನಂತರ ಮತ್ತೂಮ್ಮೆ ಜಗ್ಗೇಶ್‌ ಇನ್ನೊಂದು ಹೊಸ ವಿಷಯಕ್ಕೆ ಸಿಟ್ಟು ಮಾಡಿಕೊಳ್ಳಬೇಕು… ಇವೆಲ್ಲಾ ಅನೇಕ ವರ್ಷಗಳಿಂದ ನಡೆದುಕೊಂಡು ಬಂದಿದೆ.

ಇಷ್ಟಕ್ಕೂ ಜಗ್ಗೇಶ್‌ ಅವರಿಗೆ ಸಿಟ್ಟು ಬಂದಿರುವುದು ಏಕೆ? ಇತ್ತೀಚೆಗೆ ನಡೆದ ಒಂದು ಪತ್ರಿಕಾಗೋಷ್ಠಿಯಲ್ಲಿ ಆ ಸಿಟ್ಟನ್ನು ಹೀಗೆ ಹೊರಹಾಕಿದರು, “”ನಮ್ಮ ಜನ ಹೇಗಾಗಿದ್ದಾರೆ ಗೊತ್ತಾ? ಪ್ರಚಾರದ ವಿಷಯದಲ್ಲಿ ನಾವು ಸಹ ಹಿಂದೆ ಬಿದ್ದಿಲ್ಲ. ಒಂದು ಚಿತ್ರ ಬಿಡುಗಡೆಯ ಸಂದರ್ಭದಲ್ಲಿ ಸಾಕಷ್ಟು ಪ್ರಚಾರವನ್ನೇ ಮಾಡುತ್ತಿದ್ದೇವೆ.
ಚಾನಲ್‌ಗ‌ಳಲ್ಲಿ, ಪತ್ರಿಕೆಗಳಲ್ಲಿ, ಪೋಸ್ಟರ್‌ಗಳ, ಇಂಟರ್‌ನೆಟ್‌ನ ಮೂಲಕ ಎಷ್ಟು ಸಾಧ್ಯವೋ ಅಷ್ಟು ಜನರಿಗೆ ತಲುಪಿಸುವುದಕ್ಕೆ ಪ್ರಯತ್ನ ಮಾಡುತ್ತಿದ್ದೇವೆ. ಆದರೆ, ಎಷ್ಟೋ ಜನ ಸಿಕ್ಕಾಗ, ಏನ್‌ ಪಿಕ್ಚರ್‌ ಮಾಡ್ತಿದ್ದೀರಾ? ಯಾವಾಗ ಬಿಡುಗಡೆಯಾಗುತ್ತದೆ?

ಎಂದೆಲ್ಲಾ ಕೇಳುತ್ತಾರೆ. ಅವರನ್ನು ತಲುಪೋಕೆ ಇನ್ಯಾವ ರೀತಿಯ ಪ್ರಚಾರ ಮಾಡಬೇಕೋ ನನಗಂತೂ ಅರ್ಥವಾಗುತ್ತಿಲ್ಲ. ಪರಭಾಷೆಯ ಚಿತ್ರಗಳು ಕರ್ನಾಟಕಕ್ಕೆ ಬಂದು ಎಂಟು, ಹತ್ತು ಕೋಟಿ ಬಿಝಿನೆಸ್‌ ಮಾಡಿ ಹೋಗುತ್ತಿವೆ. ಆ ಚಿತ್ರಗಳನ್ನ ನೋಡುತ್ತಿರುವವರು ಯಾರು? ನಮ್ಮವರೇ ಅಲ್ಲವೇ. ನಮ್ಮ ಚಿತ್ರಗಳನ್ನೂ ಅದೇ ರೀತಿ ನೋಡಿ ಪ್ರೋತ್ಸಾಹಿಸಿದರೆ…” ಎಂದು ಬೇಸರದಿಂದ ಕೇಳುತ್ತಾರೆ ಜಗ್ಗೇಶ್‌.

ಮತ್ತೆ ಮಾತು ಮುಂದುವರಿಸುತ್ತಾರೆ ಅವರು. “”ಇತ್ತೀಚೆಗೆ ಒಂದು ಸಿನೆಮಾ ಬಂದಿತ್ತು. ಆ ಚಿತ್ರಕ್ಕೆ ಫೇಸ್‌ಬುಕ್‌ನಲ್ಲಿ, ಟ್ವಿಟರ್‌ನಲ್ಲಿ ಪ್ರಚಾರ ಮಾಡಲಾಗಿತ್ತು. ಚಿತ್ರ ನೋಡಿದವರು ಅನಾಸಿನ್‌ ಚಿತ್ರ ಎಂದರು. ನಮಗೆ ಮನೆ ಕಟ್ಟೋಕೆ ಮಾತ್ರ ಗೊತ್ತು. ಗಿಮಿಕ್‌ ಮಾಡೋದು ಗೊತ್ತಿಲ್ಲ” ಎಂದು ಯಾವ ಚಿತ್ರವನ್ನೂ ಪ್ರಸ್ತಾವಿಸದೆ ಹೇಳಿದರು ಜಗ್ಗೇಶ್‌.
ಮುಂದಿನ ಬಾರಿ ಜಗ್ಗೇಶ್‌ ಇನ್ನಾ$Âವ ಕಾರಣಕ್ಕೆ ಸಿಟ್ಟಾಗುತ್ತಾರೋ ಗೊತ್ತಿಲ್ಲ.

ಅಮ್ಮನ ಜಾಗಕ್ಕೆ ಮಗಳು!

tara-ammaಅಮ್ಮ ಬರಬಹುದು ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ, ಬಂದಿದ್ದು ಮಾತ್ರ ಮಗಳು…

ಯಾವ ವಿಷಯದ ಬಗ್ಗೆ ಮಾತಾಡ್ತಿದ್ದೀರಾ, ಅದನ್ನ ಮೊದಲು ಹೇಳಿÅà ಎಂದು ಗದರಬೇಡಿ. ವಿಷಯ ಏನೆಂದ್ರೆ, ಕಿಶನ್‌ ಅಭಿನಯದ ಮತ್ತು ನಿರ್ದೇಶನದ “ಕೇರ್‌ ಆಫ್ ಫ‌ುಟ್‌ಪಾತ್‌-2′ ಚಿತ್ರದಲ್ಲಿನ ಒಂದು ಪ್ರಮುಖ ಪಾತ್ರಕ್ಕೆ ಬಾಲಿವುಡ್‌ನ‌ “ಡ್ರೀಮ್‌ ಗರ್ಲ್’ ಹೇಮಾ ಮಾಲಿನಿ ನಟಿಸುತ್ತಾರೆ ಎಂದು ಸುದ್ದಿಯಾಗಿತ್ತು.
ಕಿಶನ್‌, ಮುಂಬೈಗೆ ಹೋಗಿ ಹೇಮಾಮಾಲಿನಿ ಅವರನ್ನು ಭೇಟಿ ಮಾಡಿ ಒಪ್ಪಿಸುತ್ತಿದ್ದಾರೆ ಎಂಬ ಸುದ್ದಿಯೂ ಇತ್ತು. ಈಗ ನೋಡಿದರೆ ಆ ಜಾಗಕ್ಕೆ ಹೇಮಾ ಅವರ ಮಗಳು ಇಶಾ ಡಿಯೋಲ್‌ ಬಂದಿದ್ದಾರೆ.

ಹೌದು. “ಕೇರ್‌ ಆಫ್ ಫ‌ುಟ್‌ಪಾತ್‌’ನಲ್ಲಿ ಅಭಿನಯಿಸುವುದಕ್ಕೆ ಇಶಾ ಡಿಯೋಲ್‌ ಬರುತ್ತಿದ್ದಾರೆ. ಸಾಮಾನ್ಯವಾಗಿ ಬಾಲಿವುಡ್‌ನ‌ ಬೆಡಗಿಯರನ್ನು ಬೇಡಿಕೆ ಇದ್ದಾಗಲೇ ಕರೆತರುವ ಪ್ರಯತ್ನ ಮಾಡುವುದು ವಾಡಿಕೆ. ಆದರೆ, ಇಶಾ ಚಿತ್ರರಂಗಕ್ಕೆ ಗುಡ್‌ಬೈ ಹೇಳಿ, ಮದುವೆಯಾಗಿ, ಎರಡನೆಯ ಇನ್ನಿಂಗ್ಸ್‌ಗೆ ತಯಾರಾಗುತ್ತಿರುವಾಗ ಆಕೆಯನ್ನು ಕನ್ನಡಕ್ಕೆ ಕರೆತರಲಾಗುತ್ತಿರುವುದು ವಿಶೇಷ. ಹತ್ತು ವರ್ಷಗಳ ಅನಂತರ ಯಾರಾದರೂ ಇಶಾ ಡಿಯೋಲ್‌ರನ್ನು ನಿಲ್ಲಿಸಿಕೊಂಡು, ನಿಮ್ಮ ಎರಡನೆಯ ಇನ್ನಿಂಗ್ಸ್‌ನ ಮೊದಲ ಚಿತ್ರ ಯಾವುದು ಎಂದು ಕೇಳಿದರೆ, ಕನ್ನಡದ “ಕೇರ್‌ ಆಫ್ ಫ‌ುಟ್‌ಪಾತ್‌-2′ ಎಂದು ಆಕೆ ಎದೆತಟ್ಟಿಕೊಂಡು ಹೇಳಿಕೊಳ್ಳಬಹುದು.

ಎಲ್ಲ ಮಾಡಿದ್ದು ಬಿಪಾಶಾ!

tara-bipasha“ಬಾಲಿವುಡ್‌ನಿಂದ ಒಬ್ಬ ದೊಡ್ಡ ನಟಿಯನ್ನ ಕರೆಸಿ ಚಿತ್ರದಲ್ಲಿ ಡ್ಯಾನ್ಸ್‌ ಮಾಡಿಸ್ತೀನಿ ನೋಡ್ತಾ ಇರಿ…’ ಎಂದಿದ್ದರು “ಮಾಮು ಟೀ ಅಂಗಡಿ’ ಚಿತ್ರದ ನಿರ್ದೇಶಕ ಪರಮೇಶ್‌. ಯಾವಾಗ ಬಾಲಿವುಡ್‌ ನಟಿ ಎಂಬ ಪದ ಪರಮೇಶ್‌ ಬಾಯಿಂದ ಬಂತೋ, ಮಾಧ್ಯಮದವರು ತಮಗೆ ತಾವೇ ಹುಳ ಬಿಟ್ಟುಕೊಂಡರು. ಬಾಲಿವುಡ್‌ನ‌ಲ್ಲಿ ಸದ್ಯಕ್ಕೆ ಕೆಲಸವಿಲ್ಲದಿರುವ, ಸ್ವಲ್ಪ ಕಡಿಮೆ ದುಡ್ಡಿಗೆ ಬಂದು ಹೋಗಬಹುದಾದ ಅಷ್ಟೂ ಗ್ಲಾಮರ್‌ ನಟಿಯರ ಹೆಸರು ಬರೆದುಕೊಂಡು ಇವರು ಬರಬಹುದಾ? ಅವರು ಬರಬಹುದಾ? ಎಂದು ಲೆಕ್ಕ ಹಾಕತೊಡಗಿದರು. ಈಗ ನೋಡಿದರೆ ಯಾರೂ ಬರುವುದಿಲ್ಲ ಎಂದು ಖುದ್ದು ನಿರ್ದೇಶಕ ಪರಮೇಶ್‌ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ಆ ನಟಿ ಕಾಣಿಸಿಕೊಳ್ಳಬೇಕಿದ್ದ ಹಾಡು ಮತ್ತು ದೃಶ್ಯಗಳನ್ನೇ ಕಿತ್ತು ಬಿಸಾಕಿದ್ದಾರೆ.

ಯಾಕೆ ಎಂದು ಕೇಳಿದರೆ, ಇಷ್ಟೆಲ್ಲಾ ಆಗಿದ್ದು ಬಿಪಾಶಾ ಬಸು ಅವರಿಂದ ಎಂಬ ಉತ್ತರ ಬರುತ್ತದೆ. ಪರಮೇಶ್‌ ಕಷ್ಟಪಟ್ಟು ಯಾರದೋ ಮೂಲಕ ಬಿಪಾಶಾ ಬಸು ಅವರನ್ನು ಭೇಟಿ ಮಾಡಿದರಂತೆ. ಅಷ್ಟೇ ಅಲ್ಲ, 28 ಲಕ್ಷ ಸಂಭಾವನೆಗೆ ಕುಣಿಯುವುದಕ್ಕೆ ಆಕೆಯನ್ನು ಒಪ್ಪಿಸಿದ್ದಾರೆ ಕೂಡಾ. ಆದರೆ, ಬಿಪಾಶಾ ಹಾಕಿದ ಒಂದು ಕರಾರು ಅಡ್ಡ ಬಂದಿದೆ. ಅದೇನೆಂದರೆ, ತಾನು ಬಂದು ಕುಣಿಯುವುದನ್ನು ಪ್ರಚಾರ ಮಾಡಬಾರದು, ಪತ್ರಿಕಾಗೋಷ್ಠಿಗೆ ತನ್ನನ್ನು ಕರೆಯಬಾರದು ಎಂದೆಲ್ಲಾ ಷರತ್ತುಗಳನ್ನು ಹಾಕಿದರಂತೆ. ಅರರ್ರೆà, 28 ಲಕ್ಷ ಕೊಟ್ಟು ಕರೆಸುತ್ತಿರುವುದೇ ಪ್ರಚಾರಕ್ಕಾಗಿ. ಹಾಗಿರುವಾಗ ಅದೇ ಬೇಡವೆಂದರೆ ಹೇಗೆ ಎಂದು ಪರಮೇಶ್‌ಗೆ ತಲೆಬಿಸಿಯಾಗಿದೆ. ಕೊನೆಗೆ ಸಹವಾಸವೇ ಬೇಡ ಎಂದು ಬರೀ ಬಿಪಾಶಾರನ್ನಷ್ಟೇ ಅಲ್ಲ, ಆಕೆಯ ಅಭಿನಯದ ಭಾಗವನ್ನೇ ಕಿತ್ತು ಬಿಸಾಕಿದ್ದಾರೆ ಪರಮೇಶ್‌.

ಅಲ್ಲಿಗೆ ಭಾರೀ ಪ್ರಚಾರ ಪಡೆದಿದ್ದ ಬಾಲಿವುಡ್‌ ನಟಿಯೊಬ್ಬಳ ಕನ್ನಡದ ಎಂಟ್ರಿ, ಇತಿಹಾಸದ ಪುಸ್ತಕದಲ್ಲಿ ಎಂಟ್ರಿಯಾಗಲೇ ಇಲ್ಲ ಎಂಬುದನ್ನು ನೀವು ಹೇಗೆ ತೆಗೆದುಕೊಳ್ಳುತ್ತೀರೋ ಗೊತ್ತಿಲ್ಲ.

Leave a Reply

Your email address will not be published. Required fields are marked *

ನೀವು ನೋಡುತ್ತಿರುವುದು ಉಚಿತ ಪ್ರತಿ, ತರಂಗದ ಪೂರ್ಣಪ್ರತಿಯನ್ನು ಫ್ಲಿಪ್ ಬುಕ್ ರೂಪದಲ್ಲಿ ಪಡೆಯಲು ಚಂದಾದಾರರಾಗಿ.

Powered By Indic IME