ಟೆಕ್‌ ನೆಕ್‌ ಸಿಂಡ್ರೋಮ್‌

ಡಾ. ಕೆ. ಎಸ್‌. ಚೈತ್ರಾ | June 4, 2014

Print Friendly

ಬೆಂಗಳೂರಿನ ಹತ್ತು ವರ್ಷದ ಶಾಲಾ ಬಾಲಕ ಅಮಿತ್‌ಗೆ ಆರು ತಿಂಗಳಿಂದ ಸತತವಾಗಿ ಕತ್ತು ನೋವು. ಓದಲು – ಬರೆಯಲು ಕಷ್ಟವಾಗುವಷ್ಟು ತೀವ್ರ ಬಾಧೆ. ಕಾರಣ ತಿಳಿಯದೇ ಅಪ್ಪ – ಅಮ್ಮ ಕಂಗಾಲು.

ಅಮೆರಿಕಾದ 30 ವರ್ಷದ ಸಾಫ್ಟ್ವೇರ್‌ ಇಂಜಿನಿಯರ್‌ ಬಾಬ್‌ಗ ತಿಂಗಳಿಂದ ಸಿಕ್ಕಾಪಟ್ಟೆ ತಲೆನೋವು. ಎಷ್ಟೆಂದರೆ ಕೆಲಸ ಮಾಡಲಾಗದೆ ಆಫೀಸಿಗೆ ರಜೆ ಹಾಕಿದ್ದಾರೆ.

ಸಾವಿರಾರು ಮೈಲಿ ದೂರದಲ್ಲಿದ್ದರೂ ಇವರಿಬ್ಬರ ತೊಂದರೆಗೆ ಕಾರಣ ಎಲೆಕ್ಟ್ರಾನಿಕ್‌ ಉಪಕರಣಗಳ ಅತಿಯಾದ ಬಳಕೆ, ಕಾಡುತ್ತಿರುವ ಸಮಸ್ಯೆ “ಟೆಕ್ಸ್ಟ್ ನೆಕ್‌ ಸಿಂಡ್ರೋಮ್‌’.

ಐ-ಪ್ಯಾಡ್‌, ಇ-ರೀಡರ್‌, ಮೊಬೈಲ್‌, ಸ್ಮಾರ್ಟ್‌ಫೋನ್‌, ಲ್ಯಾಪ್‌ಟಾಪ್‌ – ಹೀಗೆ ನಮ್ಮ ವೈಯಕ್ತಿಕ ಮತ್ತು ವ್ಯಾವಹಾರಿಕ ಬಳಕೆಗಾಗಿ ಇರುವ ಎಲೆಕ್ಟ್ರಾನಿಕ್‌ ಉಪಕರಣಗಳು ಕ್ರಾಂತಿ ಕಾರಕ ಬದಲಾವಣೆಯನ್ನು ತಂದಿವೆ. ಇವುಗಳಿಂದ ನಮ್ಮ ಜೀವನ ಹಗುರವಾಗಿದೆ ಎಂಬುದರಲ್ಲಿ ಸಂಶಯವಿಲ್ಲ. ಆದರೆ ಈ ಉಪಕರಣಗಳ ಮಿತಿ ಮೀರಿದ ಬಳಕೆಯಿಂದ ಆಗುತ್ತಿರುವ ದುಷ್ಪರಿಣಾಮಗಳು ಹಲವು. ಅದಕ್ಕೊಂದು ಸೇರ್ಪಡೆ ಟೆಕ್ಸ್ಟ್ ನೆಕ್‌ ಸಿಂಡ್ರೋಮ್‌.

ಏನಿದು?

ತಲೆಯನ್ನು ಮುಂದಕ್ಕೆ ಬಾಗಿಸಿ ಕೆಳಗೆ ನೋಡುತ್ತಾ ದೀರ್ಘ‌ ಸಮಯದ ಕಾಲ ಎಲೆಕ್ಟ್ರಾನಿಕ್‌ ಉಪಕರಣಗಳನ್ನು ಬಳಸುವುದರಿಂದ ಅಥವಾ ಪುನರಾವರ್ತಿತ ಒತ್ತಡದಿಂದ ಕಾಣಿಸಿಕೊಳ್ಳುವ ತೊಂದರೆಗಳನ್ನು ಟೆಕ್ಸ್ಟ್ ನೆಕ್‌ ಸಿಂಡ್ರೋಮ್‌ ಎಂದು ಕರೆಯಲಾಗುತ್ತದೆ.

ಒಂದೆರಡು ದಶಕಗಳಿಂದಲೇ ಈ ರೀತಿಯ ತೊಂದರೆಗಳು ಜನರಲ್ಲಿ ಇದ್ದರೂ “ಟೆಕ್ಸ್ಟ್ ನೆಕ್‌ ಸಿಂಡ್ರೋಮ್‌’ ಎಂಬ ಶಬ್ದವನ್ನು ಮೊದಲು ಬಳಸಿದ್ದು 2008ರಲ್ಲಿ. ವ್ಯಾಯಾಮ ತಜ್ಞ – ವೈದ್ಯ, ಡೀನ್‌ ಫಿಶ್‌ಮಾನ್‌ ತನ್ನಲ್ಲಿಗೆ ಬಂದ ಯುವಜನರಲ್ಲಿ ಬೇರೆ ಯಾವುದೇ ಕಾರಣವಿಲ್ಲದೆ ಕಾಣಿಸಿಕೊಂಡ ತಲೆನೋವು – ಕತ್ತುನೋವಿನ ಬಗ್ಗೆ ವಿಚಾರಿಸಿದಾಗ ಕಂಡುಬಂದ ಸಮಾನ ಅಂಶ ಉಪಕರಣಗಳ ಅತಿ ಹೆಚ್ಚು ಬಳಕೆ. ಅದರಲ್ಲಿಯೂ ಈ ಮೆಸೇಜ್‌ಗಳನ್ನು ಕಳಿಸಲು ಪದೇ ಪದೇ “ಟೆಕ್ಸ್ಟ್ ಮಾಡುತ್ತಿದ್ದುದರಿಂದ ಈ ಹೆಸರನ್ನು ನೀಡಿದ.

ಆಗುವುದೇನು?

ಮಾನವ ತಲೆಯ ಅಂದಾಜು ತೂಕ ಐದು ಕಿಲೋಗ್ರಾಂ. ತಲೆಯನ್ನು ಭುಜದ ಮೇಲೆ ಸರಿಯಾಗಿ ನಿಲ್ಲುವಂತೆ ಮಾಡುವ ಕೆಲಸ ಕತ್ತು ಮತ್ತು ಬೆನ್ನುಹುರಿಯದ್ದು. ತಲೆ ಸರಿಯಾದ ಸ್ಥಾನ ಅಂದರೆ ಕಿವಿಯ ಮಧ್ಯಕ್ಕೆ ಭುಜ ಲಂಬರೇಖೆಯಲ್ಲಿದ್ದಾಗ ಕತ್ತಿನ ಮೇಲೆ ಅನಗತ್ಯ ಒತ್ತಡ ಬೀಳುವುದಿಲ್ಲ. ಯಾವುದೇ ಕಾರಣದಿಂದ ಕತ್ತು ಮುಂದೆ ಬಂದಾಗ ಇದರಲ್ಲಿ ವ್ಯತ್ಯಾಸವಾಗುತ್ತದೆ. ಪ್ರತೀ ಇಂಚು ಮುಂದೆ ಬಂದಾಗ ಭುಜದ ಮೇಲಿನ ತಲೆಯ ತೂಕ ಶೇಕಡಾ ನೂರರಷ್ಟು ಹೆಚ್ಚುತ್ತದೆ.

ಅದೇ ರೀತಿ ಟೆಕ್ಸ್ಟ್ ಮಾಡಲು ಕೈ ಚಾಚಿ, ಕತ್ತು ಮುಂದೆ ವಾಲಿದಾಗ ಭುಜಗಳು ಹತ್ತಿರ ಬರುತ್ತವೆ, ಬೆನ್ನು ಗೂನಾಗುತ್ತದೆ. ಈ ಅಸಹಜ ಭಂಗಿಯಿಂದ ಬೆನ್ನುಹುರಿ, ಕತ್ತು, ಭುಜ ಮತ್ತು ತೋಳಿನ ಮಾಂಸಖಂಡಗಳ ಮೇಲೆ ಹೆಚ್ಚಿನ ಒತ್ತಡ ಬೀಳುತ್ತದೆ.

ಲಕ್ಷಣಗಳು

.ಸತತವಾಗಿ ತೀವ್ರ ತಲೆನೋವು.

.ಕತ್ತು ಬಿಗಿತ, ನೋವು.

.ತಲೆ ಸುತ್ತು-ನಿಶ್ಶಕ್ತಿ.

.ಭುಜ, ಕೈಗಳಲ್ಲಿ ಜೋಮು ಹಿಡಿಯುವಿಕೆ.

.ಬೆರಳು ನೋವು, ಚಲನೆ ಕಷ್ಟ ಸಾಧ್ಯ.

ಸಂಶೋಧನೆಗಳ ಪ್ರಕಾರ ಈ ವರೆಗೆ ಟೆಕ್ಸ್ಟ್ ನೆಕ್‌ ಸಿಂಡ್ರೋಮ್‌ 20ರಿಂದ 30ರ ಹರೆಯದ ಕಾಲೇಜು ವಿದ್ಯಾರ್ಥಿಗಳು ಮತ್ತು ಐ.ಟಿ. ಉದ್ಯೋಗಿಗಳಲ್ಲಿ ಅತೀ ಹೆಚ್ಚು ಕಂಡು ಬಂದಿದೆ.

ಆದರೆ ವೈದ್ಯರು ಮಕ್ಕಳಲ್ಲಿ ದಿನೇದಿನೇ ಹೆಚ್ಚುತ್ತಿರುವ ಈ ಸಮಸ್ಯೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಎಲೆಕ್ಟ್ರಾನಿಕ್‌ ಉಪಕರಣಗಳು ಇಂದು ಮಕ್ಕಳ ಆಟದ ಸಾಮಗ್ರಿಗಳಾಗಿವೆ. ಚಾಟಿಂಗ್‌, ಮೆಸೇಜ್‌, ಬ್ರೌಸಿಂಗ್‌, ವಿಡಿಯೋಗೇಮ್ಸ್‌ ಹೀಗೆ ಗಂಟೆಗಟ್ಟಲೇ ಒಂದೇ ಜಾಗದಲ್ಲಿ ತಪ್ಪು ಭಂಗಿಯಲ್ಲಿ ಮಕ್ಕಳು ಕುಳಿತು ಸಮಯ ಕಳೆಯುವುದು ಸಾಮಾನ್ಯ. ವೇಗವಾಗಿ ಬೆಳೆಯುವ, ಬೆಳವಣಿಗೆಯ ಹಂತದಲ್ಲಿರುವ ಮಕ್ಕಳ ಸೂಕ್ಷ್ಮ ದೇಹದ ಮೇಲೆ ಈ ರೀತಿಯ ಅತಿ ಬಳಕೆ ಖಂಡಿತಾ ಹಾನಿಕಾರಕ.

ಜತೆಗೆ, ಮಕ್ಕಳಲ್ಲಿ ದೇಹಕ್ಕೆ ಹೋಲಿಸಿದರೆ ತಲೆಯ ಗಾತ್ರ ದೊಡ್ಡದಿದ್ದು, ತಪ್ಪು$ ಭಂಗಿಯಿಂದ ಮತ್ತಷ್ಟು ಭಾರ ಕತ್ತಿಗೆ ಬೀಳುತ್ತದೆ. ನಿರಂತರವಾಗಿ ಹೀಗಾದಾಗ ತಲೆ-ಕತ್ತು ನೋವು ಮುಂತಾದ ಸಮಸ್ಯೆಗಳ ಜತೆ ಬೆನ್ನುಹುರಿಯ ಸಹಜ ಬಾಗುವಿಕೆ ಮಾಯವಾಗಿ ವಕ್ರತೆ ಕಾಣಿಸಬಹುದು. ಭವಿಷ್ಯದಲ್ಲಿ ಇಂಥ ಮಕ್ಕಳಿಗೆ ಬೇಗನೇ ಸಂಧಿವಾತ, ಶ್ವಾಸಕೋಶದ ಸಾಮರ್ಥ್ಯದಲ್ಲಿ ಕುಗ್ಗುವಿಕೆ ಕಾಣಿಸಿಕೊಳ್ಳಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ. ಹಾಗೆಯೇ ಆಟ-ಪಾಠ-ಊಟ- ಮಾತು-ಕತೆ ಎಲ್ಲವನ್ನೂ ಮೊಬೈಲ್‌ ಬಳಸಿಯೇ ಮಾಡುತ್ತಿರುವ ಇಂದಿನ ಮಕ್ಕಳ ಹಿತದೃಷ್ಟಿಯಿಂದ ಪೋಷಕರು ಅದರ ಬಳಕೆಗೆ ಕಡಿವಾಣ ಹಾಕಬೇಕು. ಏನಾದರೂ ಸಮಸ್ಯೆಗಳು ಕಂಡುಬಂದಲ್ಲಿ ನಿರ್ಲಕ್ಷಿಸಬಾರದು ಎಂಬುದು ವೈದ್ಯರ ಅಭಿಮತ.

ತಡೆ ಹೇಗೆ?

.ಸತತವಾಗಿ ವೀಕ್ಷಣೆ ಅಥವಾ ಟೈಪಿಂಗ್‌ ಮಾಡುವುದನ್ನು ಬಿಟ್ಟು ಹದಿನೈದು ನಿಮಿಷಕ್ಕೊಂದು ಪುಟ್ಟ ವಿರಾಮ ತೆಗೆದುಕೊಳ್ಳುವುದು.

.ಆಗಾಗ್ಗೆ ದೃಷ್ಟಿಯನ್ನು ಮೇಲಕ್ಕೆ ಎತ್ತಿ, ಬಾಗಿದ ಕತ್ತನ್ನು ಹಿಂದಕ್ಕೆ ಎಳೆದು ನಿಲ್ಲಿಸುವುದು.

.ಉಪಕರಣಗಳನ್ನು ಕತ್ತು ಬಗ್ಗಿಸದೇ, ಕಣ್ಣಿನ ನೇರಕ್ಕೆ ನೋಡಲು, ಅನುಕೂಲ ಆಗುವ ಹಾಗೆ ವ್ಯವಸ್ಥೆ ಮಾಡಿಕೊಳ್ಳುವುದು.

.ಬೆನ್ನ ಮೇಲೆ ಮಲಗಿ, ದಪ್ಪಗಿನ ಟವೆಲ್‌ನ್ನು ಸುರುಳಿ ಸುತ್ತಿ, ಕತ್ತಿನ ಕೆಳಗೆ ಟವೆಲ್‌ ಇಟ್ಟು ಹತ್ತು ನಿಮಿಷ ವಿರಮಿಸುವುದು.

.ಯೋಗಾಸನದ ಮೂಲಕ ಕತ್ತು ಮತ್ತು ಬೆನ್ನಿನ ಸ್ನಾಯುಗಳನ್ನು ಬಲಪಡಿಸುವುದು.

.ಮಕ್ಕಳಿಗೆ ಉಪಕರಣಗಳ ಬಳಕೆ ಚಟವಾಗದಂತೆ ಎಚ್ಚರ ವಹಿಸುವುದು ಮತ್ತು ಸ್ವತಃ ಪಾಲಿಸುವುದು.
ಒಟ್ಟಿನಲ್ಲಿ ಎಲೆಕ್ಟ್ರಾನಿಕ್‌ ಉಪಕರಣಗಳನ್ನು ಬಳಸುವಾಗ ಬೇಕು ಎಚ್ಚರ!

Leave a Reply

Your email address will not be published. Required fields are marked *

ನೀವು ನೋಡುತ್ತಿರುವುದು ಉಚಿತ ಪ್ರತಿ, ತರಂಗದ ಪೂರ್ಣಪ್ರತಿಯನ್ನು ಫ್ಲಿಪ್ ಬುಕ್ ರೂಪದಲ್ಲಿ ಪಡೆಯಲು ಚಂದಾದಾರರಾಗಿ.

Powered By Indic IME