ಮುಖಪುಟ ಲೇಖನ

ಕಣ್ಣೆದುರೇ ಕರ್ನಾಟಕ

ಮೈಥಿಲಿ ಎಸ್‌ ; ಚಿತ್ರ : ಸಂಗ್ರಹ | April 8, 2014

Print Friendly

ಅದೇ ದಿನಚರಿ, ಅದೇ ಟಿ.ವಿ., ಅದೇ ಕೆಲಸ, ಅದೇ ಗೋಳು! ಎಷ್ಟೊಂದು ಬೋರು. ಏನಾದ್ರೂ ಬದಲಾವಣೆ ಬೇಕು ಅನ್ನಿಸೋದಿಲ್ಲವೇ? ಸ್ವಲ್ಪ ಊರು ಸುತ್ತೋಣ ಬನ್ನಿ. ನಮ್ಮ ರಾಜ್ಯದಲ್ಲಿ ಎಷ್ಟೊಂದು ಸುಂದರ ತಾಣಗಳಿವೆ. ಅವರವರ ಅಭಿರುಚಿಗೆ ತಕ್ಕಂತೆಯೂ ಇವೆ. ಟ್ರೆಕ್ಕಿಂಗ್‌, ಉದ್ಯಾನವನ, ಜಲಪಾತ, ಶಿಲ್ಪಕಲೆ, ಅರಣ್ಯ ಸಫಾರಿ, ಗಿರಿಧಾಮ ಏನಿಲ್ಲ ಹೇಳಿ? ನಿಮಗೆ ಇಷ್ಟವಾಗಬಹುದಾದ ಕೆಲವೊಂದು ತಾಣಗಳ ಪರಿಚಯ ಮೂರು ಕಂತುಗಳಲ್ಲಿ ಪ್ರಕಟವಾಗಲಿದೆ. ಬೇಸಿಗೆ ರಜೆಗೆ ಇದು “ತರಂಗ’ದ ಕೊಡುಗೆ!
Three-Media-in-One1
ಕಾಣಿಸದೆ, ಕಲ್ಲು ಕಲ್ಲಿನಲಿ ಕರುನಾಡು!

ದೇಶ ಸುತ್ತುವುದು, ಕೋಶ ಓದುವುದು- ಜ್ಞಾನದ ಎಲ್ಲೆಗಳನ್ನು ವಿಸ್ತರಿಸುವ ಅದ್ಭುತ ದಾರಿಗಳಾಗಿ ಕಂಡಿದ್ದವು ನಮ್ಮ ಹಿರಿಯರಿಗೆ. ಆದರೆ ಈಗ ಅದಕ್ಕೆಲ್ಲ ಸಮಯವೆಲ್ಲಿ? ಏನಿದ್ದರೂ “ಟಾರ್ಗೆಟ್‌’ನ ಹಿಂದೆ, ಮಕ್ಕಳು 100 ಅಂಕಗಳನ್ನು ತೆಗೆಯುವ ಗುಟ್ಟುಗಳ ಹಿಂದೆ, ದುಡ್ಡು ಮಾಡುವ ಸುಲಭ ಉಪಾಯಗಳ ಹಿಂದೆ ಓಡುವವರೇ ಎಲ್ಲರೂ. ಹೀಗೆ ಮಾಡಿದ್ದನ್ನೇ ಮಾಡಿ, ತಿಂದದ್ದನ್ನೇ ತಿಂದು, ನೋಡಿದ್ದನ್ನೇ ನೋಡಿ, ನಮ್ಮ ಕಾರ್ಯಕ್ಷಮತೆ ಹನಿ ಹನಿಯಾಗಿ ಕಳೆದು ಹೋಗುತ್ತಿರುವುದನ್ನು ಎಂದಾದರೂ ಗಮನಿಸಿದ್ದೀರಾ? ಹಾಗೆ ಗಮನಿಸಲಾದರೂ ಯಾರಿಗೆ ವ್ಯವಧಾನವಿದೆ? ನಮ್ಮೆಲ್ಲ ಸಂಕಟ, ಸುಸ್ತುಗಳನ್ನು ಪರಿಹರಿಸುವ ಗುಣ ನಮ್ಮ ಮಣ್ಣಿಗೆ, ಪರಿಸರಕ್ಕಿದೆ. ಅದನ್ನು, ಗಮನಿಸುವ, ನೋಡುವ ಮನಸ್ಸು ಮಾಡಬೇಕಷ್ಟೇ! ನಾಡು ಸುತ್ತುವ ಹವ್ಯಾಸದಿಂದ ಹಿರಿಯರಲ್ಲಿ ಉಲ್ಲಾಸ ಮೂಡಿದರೆ, ಮಕ್ಕಳಲ್ಲಿ ಮನೋಭಿತ್ತಿ ವಿಸ್ತಾರವಾಗುತ್ತದೆ. ನಮ್ಮ ನಾಡಿನ, ಸಂಸ್ಕೃತಿಯ ಪರಿಚಯವಾಗುತ್ತದೆ. ಅದರ ಬಗ್ಗೆ ಹೆಮ್ಮೆ ಬೆಳೆಯುತ್ತದೆ. ಅಷ್ಟೇ ಅಲ್ಲ, ಸಹಿಷ್ಣುತೆ, ಸಮಭಾವ, ಕಾಳಜಿ ಬೆಳೆಯುತ್ತದೆ. ಮುಂದೆ ನಮ್ಮ ಪರಂಪರೆಯನ್ನು, ಅದರ ಕುರುಹುಗಳನ್ನು ಉಳಿಸಿ, ಬೆಳೆಸಬೇಕಾದವರು ಅವರೇ ತಾನೇ?

gyguhgu

gyguhgu

ಎರಡು ಸಾವಿರ ವರ್ಷಗಳಿಗೂ ಹೆಚ್ಚು ಪುರಾತನ ಇತಿಹಾಸ ನಮ್ಮ ಕರುನಾಡಿನದ್ದು. ಜಗತ್ತೇ ಗುರುತಿಸಿದ ಹೆಮ್ಮೆಯ ಪರಂಪರಾ ತಾಣಗಳು, ಬೆಟ್ಟ-ಗುಡ್ಡಗಳು, ನದಿ, ಝರಿಗಳು ನಮ್ಮ ಹೆಮ್ಮೆ. ಕರ್ನಾಟಕದಲ್ಲಿದ್ದ ಹಳೆಯ ಶಿಲಾಯುಗದ ಆಯುಧಗಳು, ಚಿನ್ನದ ನಿಕ್ಷೇಪಗಳ ಬಗ್ಗೆ ಇತಿಹಾಸವೂ ರೋಚಕ ಕಥೆ ಹೇಳುತ್ತದೆ. ನಮ್ಮನ್ನು ಆಳಿದ ಹಲವು ರಾಜಮನೆತನಗಳು ಪರಂಪರೆಯ ಮುಂದುವರಿಕೆಯಾಗಿ ಹಲವು ಐಶ್ವರ್ಯಗಳನ್ನು ಬಿಟ್ಟು ಹೋಗಿವೆ. “ಕೇಳಿಸದೆ ಕಲ್ಲು ಕಲ್ಲಿನಲಿ ಕನ್ನಡ ನುಡಿ’ ಎಂಬ ಕವಿವಾಣಿಯಂತೆ ಪ್ರತೀ ಕಲ್ಲೂ ನಮ್ಮ ಪರಂಪರೆಗೆ ಸಾಕ್ಷಿ ನುಡಿಯುತ್ತಿದೆ. ನಮ್ಮ ಮಕ್ಕಳಿಗೆ ದೂರದ ಅಮೆರಿಕಾ, ಇಂಗ್ಲೆಂಡ್‌ಗಳನ್ನು ಪರಿಚಯಿಸುವ ಮುನ್ನ ನಮ್ಮಲ್ಲಿ ಏನಿದೆ ಎನ್ನುವುದನ್ನು ತಿಳಿಸಬೇಡವೇ? ಎಪ್ರಿಲ್‌ 18 ವಿಶ್ವಪರಂಪರಾ ದಿನ. ಈ ಹಿನ್ನೆಲೆಯಲ್ಲಿ ಕರ್ನಾಟಕ ಶಿಲ್ಪಕಲಾ ವೈಭವ, ಅದ್ಭುತ ಪ್ರಾಕೃತಿಕ ಸಿರಿಯತ್ತ ದೃಷ್ಟಿ ಹರಿಸುವ ಪ್ರಯತ್ನ ಈ ಲೇಖನ.

dfdghgfh

dfdghgfh

ಪ್ರಾಚೀನ ಪರಂಪರೆಯ ತಾಣಗಳನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಪರಿಚಯಿಸುವುದು ನಮ್ಮ ಕರ್ತವ್ಯವೂ ಹೌದು. ಅವುಗಳನ್ನು ನೋಡಲು ಹೊರಟವರ ಆಯಾಸ ನೀಗಿಸಲೋ ಎಂಬಂತೆ ಅಲ್ಲಲ್ಲಿ ಜಲಪಾತಗಳು, ನದೀತಟಗಳು, ಉದ್ಯಾನವನ, ಕರಕುಶಲ ಕಲೆ ಮತ್ತಿತರ ಹಲವು ಸಂಗತಿಗಳು ಎದುರಾಗುತ್ತವೆ. ಇಲ್ಲಿ ಪರಿಚಯಿಸಿದ್ದು ಕೆಲವನ್ನು ಮಾತ್ರ. ವಿಶಾಲ ಕರ್ನಾಟಕದಲ್ಲಿ ಇನ್ನೂ ಹಲವಾರು ವಿಶೇಷಗಳು, ಅದ್ಭುತಗಳು ಇವೆ. ಮನ ಬಿಚ್ಚಿ ವೀಕ್ಷಿಸಿದರೆ, ನಮ್ಮ ಹಿರಿಯರ ಸಮೃದ್ಧಿಯನ್ನು ಪರಿಚಯಿಸುವ, ಮನದುಂಬಿಸುವ ನೂರಾರು ತಾಣಗಳು ಕಂಡಾವು. ಶುಭ ಪ್ರಯಾಣ ನಿಮ್ಮದಾಗಲಿ!

ಬಿಜಾಪುರ

dfdghgfh

dfdghgfh

ಉತ್ತರದ ಪಂಜಾಬಿನಂತೆ ಐದು ನದಿಗಳಿಂದ ಕೂಡಿ ಒಂದು ಕಾಲದಲ್ಲಿ ಪಂಜಾಬ್‌ ಎಂದು ಕರೆಸಿಕೊಂಡಿದ್ದ ಗುಮ್ಮಟಗಳ ನಾಡು ಬಿಜಾಪುರ ಐತಿಹಾಸಿಕವಾಗಿ, ರಾಜಕೀಯವಾಗಿ, ಧಾರ್ಮಿಕವಾಗಿ ಪ್ರಮುಖ ಸ್ಥಾನ ಪಡೆದಿದೆ. ಧಾರ್ಮಿಕ ಭಾವೈಕ್ಯದ ಕುರುಹುಗಳಾಗಿ ಗೋರಿಗಳು, ಮಸೀದಿ, ಮಂದಿರಗಳು, ಜೈನ ದೇವಾಲಯಗಳು ಹೆಜ್ಜೆ ಹೆಜ್ಜೆಗೂ ಕಾಣಸಿಗುತ್ತವೆ. ಭಾರತದಲ್ಲಿಯೇ ಅತಿದೊಡ್ಡ ಗುಮ್ಮಟವಿರುವ, 92 ಸಂರಕ್ಷಿತ ತಾಣಗಳಿರುವ ಬಿಜಾಪುರ ಸಾಂಸ್ಕೃತಿಕ ಶ್ರೀಮಂತಿಕೆ ಹೊಂದಿದ್ದರೂ ಆರ್ಥಿಕವಾಗಿ ಬರದ ನಾಡು. ಏಳು ವರ್ಷಗಳ ಮೊದಲು ಬಾಗಲಕೋಟೆಗೆ ಜನ್ಮ ನೀಡಿತು.

ಆದಿಲ್‌ಶಾಹಿ ಅರಸರು ಬಹಳ ಕಾಲ ಆಳಿದ ಬಿಜಾಪುರದಲ್ಲಿ ಇಂದಿಗೂ ದಖನಿ, ಉರ್ದು, ಪರ್ಶಿಯನ್‌, ಹಿಂದಿ, ಜತೆಗೆ ಕನ್ನಡ, ಮರಾಠಿ ಹೀಗೆ ಬಹುಭಾಷೆಗಳನ್ನಾಡುವ ಜನರಿದ್ದಾರೆ. ಜೋಳದ ರೊಟ್ಟಿ, ಸಜ್ಜೆ ರೊಟ್ಟಿ , ಎಣ್ಣೆಗಾಯಿ, ಶೇಂಗಾ ಹೋಳಿಗೆ, ಖಾರಬ್ಯಾಳಿ ವಿಶೇಷ ಆಹಾರ. ಚಾಲುಕ್ಯರು, ವಿಜಯನಗರದ ಅರಸರು, ರಾಷ್ಟ್ರಕೂಟರು, ಕಲಚೂರಿಗಳು, ಯಾದವರು, ಮರಾಠಾ ಪೇಶ್ವೆಗಳು ಹೀಗೆ ಬೇರೆ ಬೇರೆ ಆಡಳಿತಕ್ಕೆ ಒಳಪಟ್ಟ ನಾಡು ಇದು.
ಹಲವು ಕಲೆಗಳ ನಾಡು. ಡೊಳ್ಳು ಕುಣಿತ, ಬಯಲಾಟ, ಚೌಡಕಿ ಪದ, ಕೋಲೆಬಸವ , ವೀರಭದ್ರ ಕುಣಿತ, ಲಾವಣಿ ಪದ, ಅಲಾವಿಹೆಜ್ಜೆ ಕುಣಿತ, ಗುಳ್ಳವ್ವ , ಜೋಕುಮಾರ ಮತ್ತು ಹಲವು ಕಲೆಗಳನ್ನು ಒಳಗೊಂಡ ಬಿಜಾಪುರ ಸಾಂಸ್ಕೃತಿಕವಾಗಿಯೂ ಬಹುರೂಪಿ.

ಜಿಲ್ಲಾಕೇಂದ್ರ ಬಿಜಾಪುರದಲ್ಲಿ ಕಂಡಲ್ಲೆಲ್ಲ ಸ್ಮಾರಕಗಳೇ. ಚಪ್ಪಾಳೆ ತಟ್ಟಿದರೆ ಏಳು ಬಾರಿ ಪ್ರತಿಧ್ವನಿಸುವ ಜಗತ್ತಿನಲ್ಲೇ ಅದ್ಭುತ ಎಂದೆನ್ನಿಸಿಕೊಂಡ ಗೋಳಗುಮ್ಮಟದ ನೆಲಮಾಳಿಗೆಯಲ್ಲಿ ಆದಿಲ್‌ಶಾಹಿ ಪರಿವಾರದ ಗೋರಿಗಳಿವೆ. ಗೋಳಗುಮ್ಮಟದ ಎದುರುಗಡೆ ಇರುವ ನಗಾರಖಾನ ಪ್ರಾಚ್ಯ ವಸ್ತು ಸಂಗ್ರಹಾಲಯದಲ್ಲಿ ಆದಿಲ್‌ಶಾಹಿ ಕಾಲದ ಪುರಾತನ ವಸ್ತುಗಳನ್ನು ಸಂಗ್ರಹಿಸಿಡಲಾಗಿದೆ.

ಆಗ್ರಾ ತಾಜ್‌ಮಹಲ್‌ಗೆ ಸ್ಫೂರ್ತಿ ನೀಡಿದ, ಕಲೆಗಳ ರಾಜಾ ಇಬ್ರಾಹಿಂ ರೋಜಾ, ಇಂಡೋ-ಸಾರ್ಸೆನಿಕ್‌ ಶೈಲಿಯ, ದಕ್ಷಿಣ ಭಾರತದಲ್ಲಿಯೇ ಅತೀ ದೊಡ್ಡದಾದ ಜುಮ್ಮಾ ಮಸೀದಿ, ಪ್ರವಾದಿ ಮಹಮ್ಮದರ ಗಡ್ಡ-ಕೂದಲುಗಳನ್ನು ಸಂರಕ್ಷಿಸಿದ ಭವ್ಯವಾದ ಆಸಾರ್‌ ಮಹಲ್‌, ಎತ್ತರವಾದ ಬಾರಾ ಕಮಾನ್‌, ಮಿಶ್ರಧಾತುವಿನಿಂದ ಎರಕ ಹೊಯ್ದು ತಯಾರಿಸಿದ ತೋಪು ಇರುವ ಮೈದಾನ ತೋಪು, ಎತ್ತರದ ಕಾವಲು ಗೋಪುರ ಉಪಲಿಬುರುಜು, ವಿಶಾಲವಾದ, ಯಾವತ್ತೂ ಬತ್ತದಿರುವ ತಾಜಾಬಾವಡಿ (ಬಾವಿ), ನಾಜೂಕಿನ ಕೆತ್ತನೆಗಳಿಂದ ತುಂಬಿರುವ ಮೆಹತರ್‌ ಮಹಲ್‌, ಆಕಾಶದೆತ್ತರದ ಗಗನ ಮಹಲ್‌, ಆನಂದ ಮಹಲ್‌ ನಮ್ಮ ಹಿರಿಯರ ಕುಸುರಿ ಕೆಲಸದ ನೈಪುಣ್ಯವನ್ನು ಸಾರಿ ಸಾರಿ ಹೇಳುತ್ತವೆ. ನಗರದ ಮಧ್ಯಭಾಗದಲ್ಲಿ ಸಿದ್ಧರಾಮೇಶ್ವರ ದೇವಾಲಯಗಳಿವೆ. ನಗರದ ಹೊರಭಾಗದಲ್ಲಿ ಸಿದ್ಧೇಶ್ವರ ಸ್ವಾಮೀಜಿ ನೆಲೆಸಿರುವ ಆಶ್ರಮವಿದೆ.

ಜಿಲ್ಲಾ ಕೇಂದ್ರದಿಂದ 10 ಕಿ.ಮೀ. ದೂರದಲ್ಲಿರುವ ಭೂತನಾಳ ಕೆರೆ ನವಿಲುಗಳಿಗೆ ಬಹಳ ಪ್ರಸಿದ್ಧಿ. ಸಂಜೆಯಾಗುತ್ತಲೇ ಆರಂಭವಾಗುವ ನವಿಲಿನ ನೃತ್ಯವನ್ನು ನೋಡಿಯೇ ಸವಿಯಬೇಕು. ಭಾರತದ ಎರಡನೆಯ ಅತಿ ಎತ್ತರದ ಶಿವಮೂರ್ತಿಯಿರುವ ತಾಣ ಶಿವಗಿರಿ ನಗರದ ಹೊರವಲಯದಲ್ಲಿದೆ.

ಕೇಂದ್ರ ಬಸ್‌ ನಿಲ್ದಾಣದಿಂದ 12 ಕಿ.ಮೀ. ದೂರದಲ್ಲಿರುವ ಕಮಟಗಿ ಜಲಮಂದಿರ ರಾಣಿಯರ ಸ್ನಾನಗೃಹವಾಗಿತ್ತು. ಪಕ್ಕದಲ್ಲೇ ವಿಶಾಲವಾದ ಕೆರೆಯಿದೆ. ಬೇಗಂ ಸಾಥಿ, ನವರಸಪುರ, ಖ್ವಾಜಾ ಆಮೀರ್‌ ದರ್ಗಾ, ಮಲ್ಲಿಕಾರ್ಜುನ ಆಶ್ರಮ, ಸಿದ್ಧೇಶ್ವರ ಆಶ್ರಮ, ಸಹಸ್ರಫ‌ಣಿ ಪಾರ್ಶ್ವನಾಥ ಮಂದಿರ, ಅಮರಗಣ ಲಿಂಗಗಳ ದೇಗುಲ, ತೊರವಿ ಎಲ್ಲವೂ ಬಿಜಾಪುರ ಮತ್ತು ಅದರ ಸುತ್ತುಮುತ್ತಲು ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿವೆ.

ಬಿಜಾಪುರ ಜಿಲ್ಲಾ ಕೇಂದ್ರದಿಂದ 48 ಕಿ.ಮೀ. ದೂರದಲ್ಲಿರುವ ಆಲಮಟ್ಟಿ ಜಲಾಶಯ ಬಸವಣ್ಣನವರ ಹುಟ್ಟೂರು ಬಸವನ ಬಾಗೇವಾಡಿ ತಾಲೂಕಿನಲ್ಲಿದೆ. ಪಕ್ಕದಲ್ಲೇ ಇರುವ “ರಾಕ್‌ ಗಾರ್ಡನ್‌’ ಏಷ್ಯಾದಲ್ಲಿಯೇ ಪ್ರಸಿದ್ಧಿ ಪಡೆದ ಪ್ರವಾಸೀ ತಾಣ. ಇಲ್ಲಿ ಸಿಮೆಂಟಿನಲ್ಲಿ ಅರಳಿದ ಹಳ್ಳಿಮನೆ, ದೈತ್ಯ ಡೈನೋಸಾರ್‌ ಮತ್ತಿತರ ಜೀವಜಂತುಗಳ ಕಲಾಕೃತಿಗಳು ತಮ್ಮ ನೈಜತೆಯಿಂದ ದಂಗುಬಡಿಸುತ್ತವೆ. ಜಲಾಶಯದ ಅಕ್ಕಪಕ್ಕದಲ್ಲೇ ಸುಂದರವಾದ ಉದ್ಯಾನವನಗಳಿವೆ.

ಪ್ರಪಂಚದಲ್ಲಿಯೇ ಅಹಿಂಸೆಯನ್ನು ಕಟ್ಟುನಿಟ್ಟಾಗಿ ಪಾಲಿಸುವ ಬಸವನಬಾಗೇವಾಡಿಯಲ್ಲಿ ಬಸವೇಶ್ವರ ದೇವಾಲಯವಿದೆ. ಇಲ್ಲಿಂದ 10 ಕಿ.ಮೀ. ದೂರದಲ್ಲಿ ಪ್ರಾಚೀನ ಹಾಗೂ ಮಧ್ಯಯುಗದ ಅವಶೇಷಗಳನ್ನು ಹೊಂದಿರುವ ಇಂಗಳೇಶ್ವರ ಗ್ರಾಮವಿದೆ. ಬಾಗೇವಾಡಿಯಿಂದ 20 ಕಿ.ಮೀ. ದೂರದಲ್ಲಿರುವ ಮನಗೂಳಿ ಗ್ರಾಮದಲ್ಲಿ ಕಲ್ಯಾಣಿ ಚಾಲುಕ್ಯರ ಕಾಲದ ರಾಮೇಶ್ವರ ದೇವಾಲಯವಿದೆ.

ಐತಿಹಾಸಿಕವಾಗಿ ಪ್ರಸಿದ್ಧಿ ಪಡೆದ ರಕ್ಕಸಗಿ-ತಂಗಡಗಿ ಯುದ್ಧ ನಡೆದ ಸ್ಥಳ ತಾಳೀಕೋಟೆ ಮುದ್ದೇಬಿಹಾಳ ತಾಲೂಕಿನಲ್ಲಿದೆ. ಶಿವಶರಣೆ ನೀಲಾಂಬಿಕೆ ಬಸವಣ್ಣನನ್ನು ಹುಡುಕಿಕೊಂಡು ಬಂದು ಕಣ್ಮರೆಯಾದ ಸ್ಮಾರಕ ಮುದ್ದೇಬಿಹಾಳದಿಂದ 11 ಕಿ.ಮೀ. ದೂರದಲ್ಲಿರುವ ತಂಗಡಗಿ ಗ್ರಾಮದಲ್ಲಿದೆ. “ಶಬ್ದಮಣಿದರ್ಪಣ’ ರಚಿಸಿದ ಕೇಶಿರಾಜನ ಊರು ಕೊಂಡಗೂಳಿ ಸಿಂದಗಿ ತಾಲೂಕಿನಲ್ಲಿದೆ. 11ನೆಯ ಶತಮಾನಕ್ಕೆ ಸಂಬಂಧಿಸಿದ ಅನೇಕ ಶಾಸನಗಳು ಈ ಊರಿನಲ್ಲಿ ಅನಾಥವಾಗಿ ಬಿದ್ದುಕೊಂಡು ವಿಷಾದ ಮೂಡಿಸುತ್ತವೆ. 15ನೆಯ ಶತಮಾನದಲ್ಲಿ ನಿರ್ಮಾಣಗೊಂಡ ಸಾರಂಗ ಮಠವೂ ಸಿಂದಗಿಯಲ್ಲಿದೆ.

ಭೀಮಾ ನದಿಯ ತೀರದಲ್ಲಿರುವ ಇಂಡಿ ತಾಲೂಕಿನಲ್ಲಿ ಕರ್ನಾಟಕದ ಪಾಂಡಿಚೇರಿ ಎಂದು ಖ್ಯಾತಿ ಪಡೆದ ಹಲಸಂಗಿ ಗ್ರಾಮವಿದೆ. ಅತೀ ಹೆಚ್ಚು ನವಿಲುಗಳಿರುವ ತಾಣವಿದು. ಇಂಡಿಯಿಂದ ಆರು ಕಿ.ಮೀ. ದೂರದಲ್ಲಿರುವ ಇಂಬಾಳ ರಾಷ್ಟ್ರಮಟ್ಟದಲ್ಲಿ ಹೆಸರುವಾಸಿಯಾದ ಗ್ರಾಮ. ಗುರುದೇವ ಆರ್‌.ಡಿ. ರಾನಡೆಯವರ ಆಶ್ರಮವಿದೆ. ಕಲ್ಯಾಣಿ ಚಾಲುಕ್ಯರು ನಿರ್ಮಿಸಿದ ಕೋಟಿ ಶಂಕರಲಿಂಗ ದೇವಾಲಯವಿದ್ದು, ಅಂಗಳದ ತುಂಬಾ ಇರುವ ಶಿವಲಿಂಗಗಳು ಗಮನ ಸೆಳೆಯುತ್ತವೆ….

ಈ ಲೆಖನವನ್ನು ವಿವರವಾಗಿ ಓದಲು ತರಂಗ ಇ-ಬುಕ್‌ ಚಂದಾದಾರರಾಗಿ…

  1. admin

    May 6th, 2014 at 3:49 pm

    test

    • (0)
    • (0)

Leave a Reply

Your email address will not be published. Required fields are marked *

ನೀವು ನೋಡುತ್ತಿರುವುದು ಉಚಿತ ಪ್ರತಿ, ತರಂಗದ ಪೂರ್ಣಪ್ರತಿಯನ್ನು ಫ್ಲಿಪ್ ಬುಕ್ ರೂಪದಲ್ಲಿ ಪಡೆಯಲು ಚಂದಾದಾರರಾಗಿ.

Powered By Indic IME