ಪ್ರಿಯ ಓದುಗರೇ...

ಒಗಟಾದ ಮೌನ ವ್ರತ

| June 4, 2014

Print Friendly

1857ರ ಒಂದು ರಾತ್ರಿ, ಫ‌ಕೀರನೊಬ್ಬ ಬ್ರಿಟಿಷ್‌ ಸೈನಿಕರ ವಸತಿ ಪ್ರದೇಶದಿಂದ ಹಾದುಹೋಗುತ್ತಿದ್ದ . ಸ್ವಾತಂತ್ರ್ಯ ಸಂಗ್ರಾಮದ ಮೊದಲ ದಿನಗಳವು. ಭಾರತೀಯರ ಮನಸ್ಸಿನಲ್ಲಿ ಸ್ವಾತಂತ್ರ್ಯದ ಬೀಜ ಬಿದ್ದಿತ್ತು . ಪರಕೀಯ ಆಡಳಿತ ಅಸಹ್ಯವಾಗುತ್ತಿತ್ತು . ಆದುದರಿಂದ “ಕಂಟೋನ್‌ಮೆಂಟ್‌’ ಎಂದು ಕರೆಯಲ್ಪಡುತ್ತಿದ್ದ ಬ್ರಿಟಿಷ್‌ ಸೈನಿಕರ ವಾಸ್ತವ್ಯ ಪ್ರದೇಶದಲ್ಲಿ ಕಟ್ಟುನಿಟ್ಟಿನ ರಕ್ಷಣಾ ವ್ಯವಸ್ಥೆ ಇತ್ತು . ಇಂಥ ಸನ್ನಿವೇಶದಲ್ಲಿ ಒಬ್ಬ ಸಂತನಿಂದ ಅತಿಕ್ರಮಣ ನಡೆದಿತ್ತು!
ಇವನನ್ನು ಬಂಧಿಸಲಾಯಿತು. ವಿಚಾರಣೆಗೆ ಒಳಪಡಿಸಲಾಯಿತು. ಯಾವ ಪ್ರಶ್ನೆ ಕೇಳಿದರೂ ಇವನು ನಗುತ್ತಿದ್ದ .
ಉತ್ತರಿಸುತ್ತಿರಲಿಲ್ಲ . ನಾನಾ ರೀತಿಯಲ್ಲಿ ಪ್ರಶ್ನಿಸಲಾಯಿತು. ಹೇಗೆ ಮಾಡಿದರೂ ಇವನ ಬಾಯಿಂದ ಒಂದೇ ಒಂದು ಶಬ್ದವೂ ಹೊರಬೀಳಲಿಲ್ಲ ! ಈಗ ಬ್ರಿಟಿಷರಿಗೆ ಇವನೊಬ್ಬ ಬೇಹುಗಾರ ಇರಬೇಕು ಎಂಬ ಸಂಶಯ ಬಂತು. ಸಂನ್ಯಾಸಿಯ ವೇಷದಲ್ಲಿ ನಮ್ಮ ರಹಸ್ಯಗಳನ್ನು ತಿಳಿಯಲು ಬಂದಿರಬೇಕು ಎಂದುಕೊಂಡು ಅವನನ್ನು ಹಿಂಸಿಸತೊಡಗಿದರು. ಸತ್ಯ ಹೊರಬರಬೇಕಾದರೆ ದಂಡವೂ ಒಂದು ವಿಧಾನ ತಾನೆ! ಏನೇನು ಮಾಡಿದರೂ ಇವನು ಬಾಯಿ ಬಿಚ್ಚಲಿಲ್ಲ . ಬದಲಾಗಿ ಒಂದು ನಗು ಹೊರಬೀಳುತ್ತಿತ್ತು .

ಬಹಳ ಹೊತ್ತಿನ ಅನಂತರ ಇವನು ಬೇಹುಗಾರ ಎಂಬುದು ಬ್ರಿಟಿಷ್‌ ಸೈನಿಕರಿಗೆ ಖಾತ್ರಿಯಾಯಿತು. ಬೇಹುಗಾರನಿಗೆ ಮರಣವೇ ಶಿಕ್ಷೆಯಾಗಿತ್ತು . ಸರಿ, ಭರ್ಚಿಯಿಂದ ಇರಿದು ಅವನನ್ನು ಕೊಲ್ಲುವುದು ಎಂದು ತೀರ್ಮಾನವಾಯಿತು. ಅಂತೆಯೇ ಮಾರನೆಯ ಸೂರ್ಯಾಸ್ತದ ಸಮಯದಲ್ಲಿ ಅವನನ್ನು ಕಂಬಕ್ಕೆ ಕಟ್ಟಿ ಹಾಕಿ, ಹರಿತವಾದ ಭರ್ಚಿಯಿಂದ ಇರಿಯಲಾಯಿತು. ಭರ್ಚಿ ಹೊರತೆಗೆಯುತ್ತಿರುವಂತೆ ರಕ್ತ ಕಾರಂಜಿಯಂತೆ ಚಿಮ್ಮಿತು.

ಅದರೊಂದಿಗೆ ಸಂನ್ಯಾಸಿಯ ಬಾಯಿಂದ ಒಂದು ಮಾತು ಹೊರಬಿತ್ತು . “”ತತ್ತ್ ತ್ವಂ ಅಸಿ ಶ್ವೇತಕೇತು.” “”ನೀನೇ ಅದು ಶ್ವೇತಕೇತು.” ಇದೊಂದು ಉಪನಿಷತ್‌ ವಾಕ್ಯ! ಸೈನಿಕರಿಗೆ ಆಶ್ಚರ್ಯವಾಯಿತು. ಅಂದರೆ ಇವನಿಗೆ ಮಾತನಾಡಲು ಬರುತ್ತದೆ! ಸಾಧ್ಯವಿದ್ದಾಗಲೂ ಇವ ಮಾತನಾಡದಿದ್ದದ್ದು ಏಕೆ? ಸಾವು ಹೊಸ್ತಿಲಲ್ಲಿ ನಿಂತಿತ್ತು. ಒಂದು ಮಾತಿನಿಂದ ಅದರಿಂದ ಪಾರಾಗಬಹುದಿತ್ತು! ಅನ್ಯಾಯವಾಗಿ ತಮ್ಮಿಂದ ನಿರಪರಾಧಿ ಅಮಾಯಕನ ಹತ್ಯೆಯಾಯಿತೆ? ಎಂದು ಯೋಚಿಸುತ್ತಾ, “”ಅಯ್ನಾ! ಹಾಗೆಂದರೇನು? ನೀನೇ ಅದು ಎಂದರ್ಯಾರು? ನೀನು ಇಷ್ಟು ಹಿಂಸೆ ಅನುಭವಿಸುತ್ತಿದ್ದರೂ ಮೌನವಾಗಿದ್ದುದು ಏಕೆ?” ಎಂದು ಕೇಳಿದರು.

ಇವನೆಂದ, “”ನಾನು ಇಪ್ಪತ್ತು ವರ್ಷಗಳಿಂದ ಮೌನವ್ರತ ಆಚರಿಸುತ್ತಿದ್ದೇನೆ. ಸಾವು ಸೆಳೆದೊಯ್ಯುವಾಗ ಮಾತನಾಡುತ್ತೇನೆ ಎಂದು ವಿಧಿಸಿಕೊಂಡಿದ್ದೆ . ಈಗ ನನಗೆ ತಿಳಿದಿದೆ. ಕೆಲವೇ ಕ್ಷಣಗಳಲ್ಲಿ ನನ್ನ ಉಸಿರು ಹಾರಿಹೋಗುತ್ತದೆ. ಸಾವು ಬಂದಿದೆ. ಆದುದರಿಂದ ಮಾತನಾಡುತ್ತಿದ್ದೇನೆ. ತತ್ತ್ ತ್ವಂ ಅಸಿ. ಹರಿತವಾದ ಭರ್ಚಿ ನನ್ನ ದೇಹವನ್ನು ಸೀಳುತ್ತಿರುವಂತೆ ನನ್ನ ಇಷ್ಟು ವರ್ಷಗಳ ಸಾಧನೆ ಫ‌ಲಿಸಿತು. ಕೊಲ್ಲಲ್ಪಟ್ಟವನೂ ನಾನೇ, ಕೊಲ್ಲುವವನೂ ನಾನೇ ಆಗಿರುವುದು ನನ್ನ ಗಮನಕ್ಕೆ ಬಂತು. ನೀವೇ ನಾನು, ನಾನೇ ನೀವು! ಎಲ್ಲವೂ ಅದೇ” ಎಂದವನೇ ಇಹಯಾತ್ರೆ ಮುಗಿಸಿದ.

ಇದೊಂದು ಒಗಟಿನಂತೆ ಕಾಣಬಹುದು. ಹೇಗೆ ಸಾಧ್ಯ ಎನಿಸಲೂ ಬಹುದು. ಆದರೆ ಅಂತಿಮವಾಗಿ ಸತ್ಯ ಇದು. ಹೇಗೆ? ಇನ್ನೊಂದು ಕಥೆ ಕೇಳ್ಳೋಣ.

ಸಾಗರ ತೀರದಲ್ಲಿ ದೊಡ್ಡ ಹಬ್ಬ ನಡೆಯುತ್ತಿತ್ತು . ಉಪ್ಪಿನ ಹಬ್ಬವಾಗಿತ್ತದು. ನೂರಾರು ಜನ ನೆರೆದಿದ್ದರು. ಉಪ್ಪಿನಿಂದ ತಯಾರಿಸಿದ ನಾನಾ ರೀತಿಯ ಔಷಧಗಳು, ಉಪ್ಪಿನಕಾಯಿ, ತಿಂಡಿ – ತಿನಿಸುಗಳಿದ್ದವು. ಹಾಗೆಯೇ ಉಪ್ಪಿನ ಗೊಂಬೆಗಳಿದ್ದವು. ಇಂಥ ಎರಡು ಬೊಂಬೆಗಳ ಮಧ್ಯೆ ಮಾತುಕಥೆ ನಡೆಯುತ್ತಿತ್ತು. ಒಂದು ಗೊಂಬೆ ಹೇಳಿತು, “”ನಮ್ಮ ಮೂಲ ಈ ಸಮುದ್ರವಂತೆ. ಇದರ ನೀರಿನಲ್ಲಿ ನಾವಿದ್ದೇವಂತೆ. ಇದರ ನೀರನ್ನು ಹಾಯಿಸಿ, ಆವಿ ಮಾಡಿದಾಗ ನಮ್ಮ ಮೂಲವಸ್ತು ಸಿಗುತ್ತದಂತೆ. ಆ ಮೂಲವಸ್ತುವಿನಿಂದ ನಮ್ಮನ್ನು ಹಾಗೂ ನಮ್ಮಂಥ ನೂರಾರು, ಸಾವಿರಾರು ವಸ್ತುಗಳನ್ನು ತಯಾರಿಸುತ್ತಾರಂತೆ” ಎಂದಿತು.

ಎರಡನೆಯದು, “”ಹೌದೇನು? ಬರೀ ಹೇಳಿಕೆ ಇರಬೇಕು. ಸಮುದ್ರವನ್ನೇ ಕೇಳಬೇಕು ಯಾವುದು ಸತ್ಯ ಎಂದು. ಆದರೆ ಅದಕ್ಕೆ ಸಮಯವೆಲ್ಲಿದೆ? ಒಂದಾದಮೇಲೆ ಇನ್ನೊಂದರಂತೆ ಅಲೆಗಳನ್ನು ತಯಾರಿಸುವುದರಲ್ಲೆ ಇದೆ ಅದು. ಬರೀ ಮಾತಿನಲ್ಲಿ ಸಮಯ ಕಳೆಯುವ ಬದಲಿಗೆ, ನಾನು ಸಮುದ್ರದೊಳಗೆ ಹೋಗುತ್ತೇನೆ. ವಿಷಯ ತಿಳಿದುಕೊಂಡು ಬರುತ್ತೇನೆ. ಆಗದೇ?” ಎಂದು ಹೇಳಿ ಸೀದಾ ನೀರಿಗೆ ಹಾರಿತು. ಹಾರಿ ಮಾಯವಾಗಿ ಹೋಯಿತು.

ಬಹಳ ಸಮಯ ಕಳೆಯಿತು. ಮೊದಲ ಗೊಂಬೆ ಮರಳಿ ಬರಲೇ ಇಲ್ಲ . ಸುತ್ತಮುತ್ತಲಿನವರು ಎರಡನೆಯ ಗೊಂಬೆಯನ್ನು ಪ್ರಶ್ನಿಸತೊಡಗಿದರು. “”ಎಲ್ಲಿ ಹೋದ ನಿನ್ನ ಮಿತ್ರ?” ಎಂದರು. ಇದು ಹೇಳಿತು, “”ನಮ್ಮ ಮೂಲ ಎಲ್ಲಿ , ಯಾವುದು? ತಿಳಿದುಕೊಳ್ಳಲು ಹೋದ. ಇನ್ನೂ ಬರಲಿಲ್ಲ . ಇನ್ನು ಕಾಯಲಾರೆ, ನಾನೇ ಸ್ವತಃ ಹೋಗಿ ನೋಡುತ್ತೇನೆ” ಎಂದು ಹೇಳಿ ಅದು ನೀರಿಗೆ ಹಾರಿತು. ಶತಮಾನಗಳು ಕಳೆದುಹೋದರೂ ಅವಿನ್ನೂ ಮರಳಿ ಬರಲೇ ಇಲ್ಲವಂತೆ!

ಯಾಕೆ? “ನಾನು’ ಎಂಬುದಿರುವ ತನಕ “ಅದು’ ಆಗಲಾರವು. ಒಮ್ಮೆ “ಅದು’ ಆದೆವೋ ಮುಂದೆ ಎಂದೆಂದೂ “ನಾನು’ ಆಗಲಾರೆವು. ಅದು ಆದಿಯೂ ಹೌದು, ಅಂತ್ಯವೂ ಹೌದು. ಏಕೆಂದರೆ, ಆದಿ – ಅಂತ್ಯಗಳಿಲ್ಲದ “ನಿರಂತರ’ವೇ ಬದುಕು ! ಇದನ್ನು ಅರಿತುಕೊಳ್ಳುವ ಪ್ರಕ್ರಿಯೆಯೇ ಬದುಕು!

ಸಂಧ್ಯಾ ಪೈ
(ವ್ಯವಸ್ಥಾಪಕ ಸಂಪಾದಕರು)

Leave a Reply

Your email address will not be published. Required fields are marked *

ನೀವು ನೋಡುತ್ತಿರುವುದು ಉಚಿತ ಪ್ರತಿ, ತರಂಗದ ಪೂರ್ಣಪ್ರತಿಯನ್ನು ಫ್ಲಿಪ್ ಬುಕ್ ರೂಪದಲ್ಲಿ ಪಡೆಯಲು ಚಂದಾದಾರರಾಗಿ.

Powered By Indic IME