ಆಕಸ್ಮಿಕ ಪ್ರಧಾನಿ!

ಕೆ. ನರಸಿಂಹ | June 3, 2014

Print Friendly

rastra-inಭಾರತ ಗಣರಾಜ್ಯದ ಸಂದರ್ಭದಲ್ಲಿ ದೇಶದ ಸಾಂವಿಧಾನಿಕ ಅಧಿಪತಿಯಾದ ರಾಷ್ಟ್ರಪತಿ ಅವರನ್ನು ಸಾಮಾನ್ಯವಾಗಿ ರಬ್ಬರ್‌ಸ್ಟಾಂಪ್‌ ಎಂದು ಕರೆಯುವುದುಂಟು. ಕೇಂದ್ರ ಸಚಿವ ಸಂಪುಟದ ಆಣತಿಯಂತೆ ಅವರು ನಡೆಯಬೇಕಾಗಿರುವುದರಿಂದ ಮತ್ತು ಅವರಿಗೆ ತಮ್ಮದೇ ಆದ ಕಾರ್ಯನಿರ್ವಾಹಕ ಅಧಿಕಾರ ಇಲ್ಲದೆ ಇರುವುದರಿಂದ ರಾಷ್ಟ್ರಪತಿ ಹುದ್ದೆಯನ್ನು ಹಾಗೆ ಭಾವಿಸುತ್ತ ಬಂದಿರುವುದು ಸಹಜವೇ ಆಗಿದೆ. ಆದರೆ ಇದೀಗ ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ರಾಷ್ಟ್ರದ ಆಡಳಿತದ ಚುಕ್ಕಾಣಿ ಹಿಡಿದಿದ್ದ ಪ್ರಧಾನಮಂತ್ರಿ ಡಾ| ಮನಮೋಹನ್‌ ಸಿಂಗ್‌ ಅವರು ಬೇರ್ಯಾರದೋ ದೂರ ನಿಯಂತ್ರಣದಲ್ಲಿ ಕಾರ್ಯನಿರ್ವಹಿಸಿ ಆಡಳಿತದ ಯಾವುದೇ ವಿಷಯದಲ್ಲಿ ತಮ್ಮದೇ ಆದ ನಿಯಂತ್ರಣ ಇಲ್ಲದೆ ರಾಷ್ಟ್ರದ ಅತ್ಯುನ್ನತ ಕಾರ್ಯನಿರ್ವಾಹಕ ಹುದ್ದೆಯನ್ನು ಕೂಡ ರಬ್ಬರ್‌ಸ್ಟಾಂಪ್‌ಗೆ ಸಮೀಕರಿಸುವ ಭಾರತದ ಪ್ರಜಾಪ್ರಭುತ್ವದ ಮತ್ತು ಕ್ಯಾಬಿನೆಟ್‌ ವ್ಯವಸ್ಥೆಯ ಕುಸಿತಕ್ಕೆ ಕಾರಣರಾಗಿ ದುರಂತವನ್ನು ಸೃಷ್ಟಿಸಿದ ದುಸ್ಸಾಹಸ ಮಾಡಿದ್ದಾರೆ. ಈ ಮೂಲಕ ಅವರು ವಿಶ್ವದ ಬೃಹತ್‌ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ದುರ್ಬಲಗೊಳಿಸುವುದಕ್ಕೆ ತಮ್ಮದೇ ಆದ ಕಾಣಿಕೆಯನ್ನು ನೀಡಿದ್ದಾರೆ.

ನಿಜ. ಮನಮೋಹನ್‌ ಸಿಂಗ್‌ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಹಾಕಿದ ಗೆರೆಯನ್ನು ದಾಟುತ್ತಿರಲಿಲ್ಲವೆಂಬುದು ಮತ್ತು ಅವರ ಆಣತಿಯಂತೆಯೇ ಪ್ರಧಾನಮಂತ್ರಿ ನಡೆದುಕೊಳ್ಳುತ್ತಿದ್ದರೆಂಬುದು ಸರ್ವವಿದಿತವಾದ ಸಾಮಾನ್ಯ ಭಾವನೆಯಾಗಿತ್ತು. ಈಗ್ಗೆ ಕೆಲವು ದಿನಗಳ ಹಿಂದೆ ಬಿಡುಗಡೆಯಾದ ಎರಡು ಪುಸ್ತಕಗಳು ಈ ಅಭಿಪ್ರಾಯವನ್ನು ಪುಷ್ಟೀಕರಿಸುವುದಷ್ಟೇ ಅಲ್ಲ, ಅಂಥ ಭಾವನೆಯನ್ನು ಸಮರ್ಥಿಸಿವೆ ಕೂಡ. ಯುಪಿಎ-1ರ ಅವಧಿಯಲ್ಲಿ ಪ್ರಧಾನಮಂತ್ರಿಯವರ ಮಾಧ್ಯಮ ಸಲಹೆಗಾರರಾಗಿದ್ದ ಸಂಜಯ ಬರು ಅವರ “ದಿ ಆಕ್ಸಿಡೆಂಟಲ್‌ ಪ್ರೈಮ್‌ ಮಿನಿಸ್ಟರ್‌; ದಿ ಮೇಕಿಂಗ್‌ ಆ್ಯಂಡ್‌ ಅನ್‌ಮೇಕಿಂಗ್‌ ಆಫ್ ಮನಮೋಹನ್‌ ಸಿಂಗ್‌’ ಹಾಗೂ ಇದೇ ಅವಧಿಯಲ್ಲಿ ಕಲ್ಲಿದ್ದಲು ಖಾತೆಯ ಕಾರ್ಯದರ್ಶಿಯಾಗಿದ್ದ ಪಿ. ಸಿ. ಪಾರಖ್‌ ಅವರ “ಕ್ರುಸೇಡರ್‌ ಆರ್‌ ಕಾನ್‌ಸ್ಪಿರೇಟರ್‌? ಕೋಲ್‌ಗೇಟ್‌ ಆ್ಯಂಡ್‌ ಅದರ್‌ ಟ್ರಾಥ್ಸ್’ ಈ ಎರಡು ಪುಸ್ತಕಗಳು ಮನಮೋಹನ್‌ ಸಿಂಗ್‌ ಹಾಗೂ ಅವರ ನೇತೃತ್ವದ ಪ್ರಧಾನಮಂತ್ರಿಗಳ ಕಾರ್ಯಾಲಯ ಯಾವ ರೀತಿಯಾಗಿ ಅನುಚಿತವಾಗಿ ಮತ್ತು ಅನಪೇಕ್ಷಣೀಯವಾಗಿ ನಡೆದುಕೊಂಡಿತೆಂಬುದನ್ನು ವಿವರವಾಗಿ ಬಿಚ್ಚಿಟ್ಟಿದೆ. ಈ ಎರಡು ಕೃತಿಗಳಲ್ಲಿ ಅಡಕವಾಗಿರುವ ಅಂಶಗಳು ಮತ್ತು ಮಾಹಿತಿಗಳು ನಿಜಕ್ಕೂ ಕಳವಳಕಾರಿಯಾಗಿದ್ದು ಪ್ರಧಾನಮಂತ್ರಿಗಳ ನಿಯಂತ್ರಣಕ್ಕೆ ಹೊರತಾದ ಆಡಳಿತ ದೇಶವನ್ನು ಎಂಥ ದುಃಸ್ಥಿತಿಗೆ ಕೊಂಡೊಯ್ದಿತು ಎಂಬುದು ಮನದಟ್ಟಾಗುತ್ತದೆ.

ಎರಡು ಪುಸ್ತಕಗಳು

ವಾಸ್ತವದಲ್ಲಿ, ರಾಷ್ಟ್ರದ ಆಡ‌ಳಿತದ ಘನತೆ ಮತ್ತು ಗಾಂಭೀರ್ಯತೆ ಕಾಂಗ್ರೆಸ್‌ ನೇತೃತ್ವದ ಯುಪಿಎ ಸರಕಾರದ ಮೊದಲ ಅವಧಿಯಲ್ಲೇ ಆರಂಭಗೊಂಡಿತೆಂಬುದನ್ನು ಈ ಕೃತಿಗಳು ಬಹಿರಂಗಪಡಿಸುತ್ತವೆ. ಯುಪಿಎಯ ನಿರಂತರ ಎರಡನೆಯ ಅವಧಿಯಲ್ಲಿ ದುರ್ಬಲ ಪ್ರಧಾನಮಂತ್ರಿಯ ಆಡಳಿತ ಮತ್ತಷ್ಟು ಅಧೋಗತಿಗೆ ಹೋಗಲು ಕಾರಣವಾಯಿತೆಂಬುದರಲ್ಲಿ ಅನುಮಾನ ಉಳಿಯಲಾರದು. ಈ ಹತ್ತು ವರ್ಷಗಳ ದೀರ್ಘಾವಧಿಯಲ್ಲಿ ಮನಮೋಹನ್‌ ಸಿಂಗ್‌ ಅವರು ತಮ್ಮನ್ನು ತಮ್ಮ ಅಧಿಕಾರವನ್ನು ಬಲವಾಗಿ ಪ್ರತಿಪಾದಿಸಿದ ಸಂದರ್ಭ ತೀರಾ ವಿರಳವಾಗಿರಬಹುದು ಅಥವಾ ಇರಲಿಕ್ಕಿಲ್ಲ. ತಮ್ಮ ಕಾರ್ಯಾಲಯವನ್ನು ದುರುಪಯೋಗಪಡಿಸಿಕೊಳ್ಳುವುದಕ್ಕೆ ಅವಕಾಶ ಮಾಡಿಕೊಡುವುದರ ಜತೆಗೆ ತಮ್ಮ ಅಧಿಕಾರವನ್ನು ಸಮರ್ಥವಾಗಿ ಮತ್ತು ಸಂವಿಧಾನದ ಆಶಯಕ್ಕೆ ಅನುಗುಣವಾಗಿ ಚಲಾಯಿಸದಿರುವುದಕ್ಕೂ ಅವರೇ ಕಾರಣರಾಗುತ್ತಾರೆ. ಸಾವಿರಾರು ಕೋಟಿ ರೂಪಾಯಿಗಳ ಮಹಾನ್‌ ಹಗರಣಗಳ ಮತ್ತು ಅನಿಯಂತ್ರಿತ ಭ್ರಷ್ಟಾಚಾರ ಹಾಗೂ ದುರಾಡಳಿತ ಅವರ ದಶಕದ ಕಾರ್ಯನಿರ್ವಹಣಾ ಅವಧಿಯ ಪ್ರಧಾನ ಲಕ್ಷಣಗಳಾಗಬಹುದು. ಅವರ ಎರಡನೆಯ ಕಾರ್ಯಾವಧಿಯ ಕುರಿತಾದ ಕೃತಿಗಳನ್ನು ಮುಂದೆಯಾದರೂ ಬರೆದರೆ ವಸ್ತುಸ್ಥಿತಿಯ ನೈಜ ಅರಿವು ಉಂಟಾದೀತು.

ಸಂಜಯ ಬರು ಅವರ ಪ್ರಕಾರ ಪ್ರಧಾನಮಂತ್ರಿಗಳು ಬರೀ ಹೆಸರಿಗಷ್ಟೇ ಇದ್ದರು. ಅಧಿಕಾರವೆಲ್ಲ ಸೋನಿಯಾ ಗಾಂಧಿ ಅವರ ಕೈಯಲ್ಲೇ ಇತ್ತು. ಅನೇಕ ಸಚಿವರು ಪ್ರಧಾನಮಂತ್ರಿಗಳೊಂದಿಗೆ ಸಂಪರ್ಕವನ್ನೇ ಹೊಂದಿರಲಿಲ್ಲ. ಅವರು ನೇರವಾಗಿ ಸೋನಿಯಾ ಅವರಿಂದಲೇ ಆದೇಶ ಪಡೆಯುತ್ತಿದ್ದರು. ಕೆಲವು ಸಚಿವರು ಮನಮೋಹನ್‌ ಸಿಂಗ್‌ ಅವರಿಗೆ ಮುಜುಗರ ಉಂಟು ಮಾಡುವುದರಲ್ಲಿ ತಲ್ಲೀನರಾಗಿದ್ದರು. ಸೋನಿಯಾ ಗಾಂಧಿ ಅವರು ಪ್ರಧಾನಮಂತ್ರಿಗಳಿಗೆ ಬರೆದ ಕೆಲವು ಆಯ್ದ ವಿಷಯಗಳನ್ನು ವ್ಯವಸ್ಥಿತವಾಗಿ ಮಾಧ್ಯಮಗಳಿಗೆ ಸೋರಿಕೆ ಮಾಡುತ್ತ ಪ್ರಧಾನಮಂತ್ರಿಯವರ ಘನತೆ – ಗೌರವಗಳೊಂದಿಗೆ ಚೆಲ್ಲಾಟವಾಡುತ್ತಿದ್ದರು. ಆಗಿನ ಹಣಕಾಸು ಸಚಿವರಾಗಿದ್ದ ಈಗಿನ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ , ರಕ್ಷಣಾ ಸಚಿವ ಎ. ಕೆ. ಆ್ಯಂಟನಿ ಅಂಥವರು ಕೂಡ ಮಹಣ್ತೀದ ವಿಷಯಗಳನ್ನು ಪ್ರಧಾನಮಂತ್ರಿಯವರಿಗೆ ವರದಿ ಮಾಡದೆ ನೇರವಾಗಿ ಸೋನಿಯಾ ಗಾಂಧಿ ಅವರಿಗೆ ವಿವರಿಸುತ್ತಿದ್ದರು. ಹೀಗಾಗಿ ಕಾಂಗ್ರೆಸ್‌ ಪಕ್ಷದಲ್ಲಿ ಮತ್ತು ಸರಕಾರದಲ್ಲಿ ಮನಮೋಹನ್‌ ಸಿಂಗ್‌ ಅವರು ತೀವ್ರ ಅವಗಣನೆಗೆ ಗುರಿಯಾಗಿದ್ದರು.

ಶರದ್‌ ಪವಾರ್‌ರ ನೆರವು

ಸರಕಾರದಲ್ಲಿ ಏಕಾಂಗಿಯೂ, ಅಸಹಾಯಕರೂ ಆಗಿದ್ದ ಮನಮೋಹನ್‌ ಸಿಂಗ್‌ ಅವರ ನೆರವು ಮತ್ತು ಬೆಂಬಲಕ್ಕೆ ಹಲವು ಬಾರಿ ಕೃಷಿ ಸಚಿವ ಮತ್ತು ಯುಪಿಎ ಘಟಕ ಪಕ್ಷವಾದ ನ್ಯಾಶನಲಿಸ್ಟ್‌ ಕಾಂಗ್ರೆಸ್‌ ಪಕ್ಷ (ಎನ್‌ಸಿಪಿ)ದ ಶರದ್‌ ಪವಾರ್‌ ಅವರು ಧಾವಿಸುತ್ತಿದ್ದರು.

ಸುಮಾರು 20 ತಿಂಗಳ ಕಾಲ ಕಲ್ಲಿದ್ದಲು ಖಾತೆಯ ಕಾರ್ಯದರ್ಶಿ ಯಾಗಿದ್ದ ಪಾರಖ್‌ ಅವರು ಮನಮೋಹನ್‌ ಸಿಂಗ್‌ ಅವರ ಬಗ್ಗೆ ಒಳ್ಳೆಯ ಅಭಿಪ್ರಾಯವನ್ನು ಹೊಂದಿರುವುದಾದರೂ ಅವರ ನಿಷ್ಕ್ರಿಯತೆ ಯಾವ ರೀತಿಯಲ್ಲಿ ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಹಗರಣಕ್ಕೆ ಕಾರಣವಾಯಿತೆಂಬುದನ್ನು ಬಹಿರಂಗ ಪಡಿಸಿದ್ದಾರೆ. ಪ್ರಧಾನಮಂತ್ರಿಗಳು ಕಲ್ಲಿದ್ದಲು ನಿಕ್ಷೇಪ ಹಂಚಿಕೆ ವಿಷಯದಲ್ಲಿ ಸುಧಾರಣೆಗಾಗಿ ದೃಢ ಮನಸ್ಸು ಮಾಡಿದ್ದರೆ ಬಹುಕೋಟಿಗಳ ಕಲ್ಲಿದ್ದಲು ಹಂಚಿಕೆ ಹಗರಣವನ್ನು ತಡೆಯಬಹುದಿತ್ತು ಎಂದು ಹೇಳಿದ್ದಾರೆ. ಆಶ್ಚರ್ಯವೆಂದರೆ, ಪಾರಖ್‌ ಅವರು ನಿವೃತ್ತಿಯಾದ ಐದಾರು ವರ್ಷಗಳ ಅನಂತರ ಕೇಂದ್ರೀಯ ತನಿಖಾ ದಳ (ಸಿಬಿಐ) ಕೋಲ್‌ಗೇಟ್‌ ಎಂದೇ ಖ್ಯಾತಿಯಾದ ಕಲ್ಲಿದ್ದಲು ಹಗರಣದಲ್ಲಿ ಸಂಚು ನಡೆಸಿದ ಆರೋಪದ ಮೇಲೆ ಪಾರಖ್‌ ಅವರ ವಿರುದ್ಧ ಪ್ರಥಮ ಮಾಹಿತಿ ವರದಿಯನ್ನು ದಾಖಲಿಸಿದೆ. ಇದು ಒಡಿಶಾದ ಒಂದು ಕಂಪೆನಿಗೆ ಕಲ್ಲಿದ್ದಲು ನಿಕ್ಷೇಪ ಮಂಜೂರು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದ್ದು. ಈ ಪ್ರಕರಣದಲ್ಲಿ ಒಂದು ವೇಳೆ ಒಳಸಂಚು ಇತ್ತು ಎಂದು ಹೇಳುವುದಾದರೆ ಅದರ ಕುರಿತು ಅಂತಿಮ ನಿರ್ಣಯ ತೆಗೆದು ಕೊಂಡಿರುವವರ ನಡುವೆ ಇದ್ದಿರಲು ಸಾಧ್ಯ. “”ಅಂತಿಮ ನಿರ್ಧಾರ ಪ್ರಧಾನ ಮಂತ್ರಿ ಅವರದು. ನಾನು ಒಳಸಂಚಿನಲ್ಲಿ ಭಾಗಿಯಾಗಿದ್ದರೆ ಪ್ರಧಾ® ‌ಮಂತ್ರಿಗಳು ಕೂಡ ಭಾಗಿಯಾಗುತ್ತಾರೆ” ಎಂದಿದ್ದಾರೆ ಪಾರಖ್‌. ಆದರೆ ಈವರೆಗೆ ಪ್ರಧಾನಮಂತ್ರಿಯವರಿಂದ ವಿವರಣೆಯನ್ನು ಕೇಳುವುದಕ್ಕಾದರೂ ಸಿಬಿಐ ಮನಮೋಹನ್‌ ಸಿಂಗ್‌ ಅವರನ್ನು ಸಂಪರ್ಕಿಸಿಲ್ಲ! ಈ ನಿರ್ದಿಷ್ಟ ಅವಧಿ ಯಲ್ಲಿ ಕಲ್ಲಿದ್ದಲು ಖಾತೆಯನ್ನು ಹೊಂದಿದ್ದವರು ಡಾ| ಮನಮೋಹನ್‌ ಸಿಂಗ್‌!

ಸಾಂದರ್ಭಿಕ ಕಾರಣಗಳಿಂದಾಗಿ ಮನಮೋಹನ್‌ ಸಿಂಗ್‌ ಅವರು ಆಕಸ್ಮಿಕವಾಗಿ ಮತ್ತು ಅಯಾಚಿತವಾದ ಪ್ರಧಾನಮಂತ್ರಿಯಾಗಿದ್ದಿರಬಹುದು. ಅದು ಅವರಿಗೆ ಬಯಸದೆ ಬಂದ ಭಾಗ್ಯವೂ ಆಗಿದ್ದೀತು. ಅಂದ ಮಾತ್ರಕ್ಕೆ ಅವರು ತಮ್ಮನ್ನು ತಾವು ಮತ್ತು ಪ್ರಧಾನಮಂತ್ರಿ ಹುದ್ದೆಯ ಘನತೆ, ಗೌರವ, ಪ್ರತಿಷ್ಠೆಗಳೊಂದಿಗೆ ರಾಜಿ ಮಾಡಿಕೊಳ್ಳಬೇಕೆಂದೇನೂ ಇಲ್ಲ. ಆರ್ಥಿಕ ಪರಿಣತಿ ಮತ್ತು ಸಜ್ಜನಿಕೆ ಮಾತ್ರ ಪ್ರಧಾನಿ ಹುದ್ದೆಯ ಪರಿಣಾಮವನ್ನು ವೃದ್ಧಿಸುವುದಿಲ್ಲ. ಆತ್ಮಗೌರವು ಅಚಲ ನಿಷ್ಠೆ, ಬದ್ಧತೆ, ನಿರ್ದಾಕ್ಷಿಣ್ಯತೆ, ದಕ್ಷತೆ, ಧೈರ್ಯ – ಸ್ಥೈರ್ಯ ಮತ್ತು ಎಲ್ಲಕ್ಕೂ ಮುಖ್ಯವಾಗಿ ರಾಜಧರ್ಮ ಬಹುಮುಖ್ಯ. ಅವೆಲ್ಲವನ್ನೂ ಮನಮೋಹನ್‌ ಸಿಂಗ್‌ ಹೊಂದಿದ್ದರೆ?

Leave a Reply

Your email address will not be published. Required fields are marked *

ನೀವು ನೋಡುತ್ತಿರುವುದು ಉಚಿತ ಪ್ರತಿ, ತರಂಗದ ಪೂರ್ಣಪ್ರತಿಯನ್ನು ಫ್ಲಿಪ್ ಬುಕ್ ರೂಪದಲ್ಲಿ ಪಡೆಯಲು ಚಂದಾದಾರರಾಗಿ.

Powered By Indic IME